ಮುಂಬೈ: ವಾಂಖೆಡೆಯಲ್ಲಿ ನಡೆದ 14ನೇ ಆವೃತ್ತಿಯ ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಪಡೆ 18 ರನ್‌ಗಳ ರೋಚಕ ಗೆಲುವು ಸಾಧಿಸಿದೆ.
ಸಿಎಸ್‌ಕೆ ನೀಡಿದ 221 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ್ದ ಕೆಕೆಆರ್ ಸತತ ವಿಕೆಟ್‌ಗಳ ಪತನದ ಹೊರತಾಗಿಯೂ ಚೆನ್ನೈ ಬಳಗದಲ್ಲಿ ಸೋಲಿನ ಭಯ ಹುಟ್ಟಿಸಿದ್ದು ಸುಳ್ಳಲ್ಲ. ಒಂದು ಕಡೆ ವಿಕೆಟ್ ಬೀಳುತ್ತಿದ್ರು ಆ್ಯಂಡ್ರೆ ರಸೆಲ್ ಅವರ ಪವರ್ ಹಿಟ್‌ಗಳು ಚೆಂಡನ್ನು ಬೌಂಡರಿ ಗೆರೆ ದಾಟಿಸುತ್ತಿದ್ದವು. ಕೊನೆಗೂ ಪ್ಯಾಟ್ ಕಮಿನ್ಸ್, ಆ್ಯಂಡ್ರೆ ರಸೆಲ್ ಹಾಗೂ ದಿನೇಶ್ ಕಾರ್ತಿಕ್ ಅವರ ಹೋರಾಟ ವ್ಯರ್ಥವಾಯಿತು.
ಕಮಿನ್ಸ್ 34 ಎಸೆತಗಳಿಂದ 66 ರನ್ ಗಳಿಸಿ ಅಜೇಯರಾಗಿ ಉಳಿದರೆ, ರಸೆಲ್ ಕೇವಲ 22 ಎಸೆತಗಳಿಂದ 3 ಬೌಂಡರಿ, 6 ಸಿಕ್ಸರ್ ಸಹಿತ 54 ರನ್ ಸಿಡಿಸಿದರು. ಕಾರ್ತಿಕ್ 24 ಎಸೆತಗಳಿಂದ 40ರನ್‌ಗಳ ಆಟ ವ್ಯರ್ಥವಾಯಿತು. ಚೆನ್ನೈ ಪರ ದೀಪಕ್ ಚಾಹರ್ 4, ಲುಂಗಿ ಎನ್ಗಿಡಿ 3 ವಿಕೆಟ್ ಪಡೆದರು. ಮಹೇಂದ್ರ ಸಿಂಗ್ ದೋನಿ ನೇತೃತ್ವದ ಸಿಎಸ್‌ಕೆ ಆಡಿದ 4 ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.
ಇದನ್ನೂ ಓದಿ: ಅಬ್ಬರಿಸಿದ ಡುಪ್ಲೆಸಿಸ್, ಗಾಯಕ್ವಾಡ್: ಕೆಕೆಆರ್ಗೆ 221 ರನ್‌ಗಳ ಬೃಹತ್ ಗುರಿ ನೀಡಿದ ಧೋನಿ ಪಡೆ
ಚೆನ್ನೈನ ಆರಂಭಿಕರಿಂದ ಶತಕದ ಜೊತೆಯಾಟ
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್ ಭಾರಿ ಬೆಲೆ ತೆರಬೇಕಾಯಿತು. ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಫಾಫ್ ಡುಪ್ಲೆಸಿ ಮತ್ತು ಋತುರಾಜ್ ಗಾಯಕವಾಡ್ ಮುರಿಯದ ವಿಕೆಟ್‌ಗೆ ಶತಕದ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿದ್ರು. ಈ ಜೋಡಿ ಮೊದಲ ವಿಕೆಟ್‌ಗೆ 115 ರನ್‌ಗಳಿಸಿತು. 42 ಎಸೆತಗಳಿಂದ 6 ಬೌಂಡರಿ, 4 ಸಿಕ್ಸರ್ ಸೇರಿ 64 ರನ್ ಗಳಿಸಿದ ಗಾಯಕ್‌ವಾಡ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು.
ಬಳಿಕ ಡುಪ್ಲೆಸಿಸ್, ಮೊಯೀನ್ ಅಲಿ ಜತೆಗೂಡಿ ಬಿರುಸಿನ ಆಟವನ್ನು ಮುಂದುವರಿಸಿ 60 ಎಸೆತಗಳಿಂದ 9 ಬೌಂಡರಿ, 4 ಸಿಕ್ಸರ್ ಸೇರಿ 95 ರನ್‌ಗಳಿಸಿ ಔಟಾಗದೆ ಉಳಿದರು. ಅಲಿ 25, ನಾಯಕ ಧೋನಿ 17 ಹಾಗೂ ಜಡೇಜಾ ಔಟಾಗದೆ 6 ರನ್‌ಗಳಿದರು. ಕೋಲ್ಕತ್ತಾ ಪರ ಚಕ್ರವರ್ತಿ, ಸುನೀಲ್ ನರೈನ್ ಹಾಗೂ ರಸೆಲ್ ತಲಾ 1 ವಿಕೆಟ್ ಪಡೆದರು.