ನವದೆಹಲಿ : ಇಲ್ಲಿನ ಅರುಣ್ ಜೇಟ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2021ರ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ವಾರ್ನರ್ ತಂಡದ ವಿರುದ್ಧ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಧೋನಿ ಪಡೆ ಗೆಲುವಿನ ಫೇವರಿಟ್ ಎನಿಸಿಕೊಂಡಿದೆ.
ಕಳೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಅಬ್ಬರಿಸಿದ್ದ ಆಲ್‌ರೌಂಡರ್ ರವೀಂದ್ರ ಜಡೇಜಾ ಸಿಎಸ್‌ಕೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೆ,ಆರಂಭಿಕರಾದ ಫಾಫ್ ಡು ಪ್ಲೆಸಿಸ್ ಮತ್ತು ರುತುರಾಜ್ ಗಾಯಕ್ವಾಡ್ ಕೂಡ ಅದ್ಭುತ ಲಯದಲ್ಲಿದ್ದು, ಸುರೇಶ್ ರೈನಾ ಮತ್ತು ಅಂಬಾಟಿ ರಾಯುಡು ತಂಡದ ಮೊತ್ತ ಹೆಚ್ಚಿಸುವ ಶಕ್ತಿಗಳಾಗಿದ್ದಾರೆ.
ಅಲ್ಲದೆ ಸಿಎಸ್‌ಕೆ ಸ್ಯಾಮ್ ಕರನ್, ಬ್ರಾವೋ ಸೇರಿ ಆಲ್ರೌಂಡರ್ಗಳ ದಂಡನ್ನೇ ಹೊಂದಿದೆ. ಇನ್ನೊಂದೆಡೆ ನಾಯಕ ಡೇವಿಡ್ ವಾರ್ನರ್, ಓಪನರ್ ಜಾನಿ ಬೈರ್‌ಸ್ಟೋವ್, ಕೇನ್ ವಿಲಿಯಮ್ಸನ್ ಮತ್ತು ರಶೀದ್ ಖಾನ್ ಅವರನ್ನೊಳಗೊಂಡ ಹೈದರಾಬಾದ್ ಗೆಲುವು ಸಾಧಿಸಲು ಪರದಾಡುತ್ತಿದೆ. ಈ ತಂಡವು ಅಗ್ರಕ್ರಮಾಂಕದ ಬ್ಯಾಟ್ಸ್ಮನ್ಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಅದರಲ್ಲೂ ಸನ್ರೈಸರ್ಸ್ಗೆ ದೇಶಿ ಆಟಗಾರರ ವೈಫಲ್ಯ ತಲೆನೋವಾಗಿದೆ. ಕಡಿಮೆ ಟಾರ್ಗೆಟ್ ಇದ್ದರೂ ಕೂಡ ಗೆಲುವಿನ ದಡ ಸೇರುವಲ್ಲಿ ತಂಡವು ಎಡವುತ್ತಿದೆ. ಅನುಭವಿ ಭುವನೇಶ್ವರ್ ಕುಮಾರ್‌ಗೆ ಸ್ಥಿರತೆಯ ಕೊರತೆ, ಗಾಯದಿಂದಾಗಿ ಯಾರ್ಕರ್ ಕಿಂಗ್ ಟಿ. ನಟರಾಜನ್ ಅನುಪಸ್ಥಿತಿಯು ತಂಡಕ್ಕೆ ದೊಡ್ಡ ನಷ್ಟವಾಗಿದೆ.
ಹೀಗಾಗಿ, 5 ಪಂದ್ಯಗಳಲ್ಲಿ ಏಕಮಾತ್ರ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ ಹೈದರಾಬಾದ್ ಕೊನೆಯ ಸ್ಥಾನದಲ್ಲಿದ್ದು, ಸಿಎಸ್‌ಕೆ ವಿರುದ್ಧ ಗೆಲುವು ಅನಿವಾರ್ಯವಾಗಿದೆ. ಪಂದ್ಯವು ಎಂದಿನಂತೆ ಸಾಯಂಕಾಲ 7.30ಕ್ಕೆ ಆರಂಭವಾಗಲಿದೆ.
ಇದನ್ನೂ ಓದಿ: ರಾಷ್ಟ್ರರಾಜಧಾನಿಯಲ್ಲಿ ಹೊಸ ಕಾಯ್ದೆ ಜಾರಿ : ಇನ್ಮುಂದೆ ಸಿಎಂಗಿಂತ ಲೆಫ್ಟಿನೆಂಟ್ ಗವರ್ನರ್ಗೆ ಹೆಚ್ಚಿನ ಅಧಿಕಾರ..