ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಯಲ್ಲಿ ಭಾಗಿಯಾಗಿರುವ ಗುಜರಾತ್ ಟೈಟನ್ಸ್ ಚೊಚ್ಚಲ ಪ್ರಯತ್ನದಲ್ಲೇ ಫೈನಲ್ಗೆ ಲಗ್ಗೆ ಹಾಕಿದೆ. ತಂಡದ ಮುಂದಾಳತ್ವ ವಹಿಸಿಕೊಂಡ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ತಾವೊಬ್ಬ ಆಲ್ರೌಂಡರ್ ಮಾತ್ರವಲ್ಲ, ನಾಯಕನಾಗಿ ಮಿಂಚುವ ಮೂಲಕ ಗಮನ ಸೆಳೆದಿದ್ದಾರೆ. ಹೀಗಾಗಿ, ಇದೀಗ ಎಲ್ಲರ ಬಾಯಲ್ಲೂ ಹಾರ್ದಿಕ್ ಪಾಂಡ್ಯ ಹೆಸರು ಮತ್ತೊಮ್ಮೆ ಕುಣಿದಾಡಲು ಶುರು ಮಾಡಿದೆ.
ಕಳೆದ ಕೆಲ ತಿಂಗಳಿಂದ ಅನೇಕ ಏರಿಳಿತ ಕಂಡಿರುವ ಹಾರ್ದಿಕ್ ಪಾಂಡ್ಯ, ಐಪಿಎಲ್ನಲ್ಲಿ ಎಲ್ಲ ಕಠಿಣ ಸವಾಲು ಮೆಟ್ಟಿನಿಂತು, ಕೂಲ್ ಆಗಿ ತಂಡವನ್ನ ಮುನ್ನಡೆಸಿ ಫೈನಲ್ಗೆ ತಂದು ನಿಲ್ಲಿಸಿದ್ದಾರೆ. ಅಲ್ಪಾವಧಿಯ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲೇ ಎಲ್ಲ ಏಳು - ಬೀಳು ಕಂಡಿರುವ ಹಾರ್ದಿಕ್, ಗಾಯದ ಸಮಸ್ಯೆ, ಶಸ್ತ್ರಚಿಕಿತ್ಸೆ, ವಿವಾದಗಳನ್ನ ನಗುಮುಖದಿಂದಲ್ಲೇ ಎದುರಿಸಿದ್ದಾರೆ. ಗುಜರಾತ್ ಟೈಟನ್ಸ್ ನಾಯಕತ್ವ ವಹಿಸಿಕೊಳ್ಳುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ಬಗ್ಗೆ ಅನೇಕ ಪ್ರಶ್ನೆ ಎದ್ದಿದ್ದವು. ಆದರೆ, ಅಂತಿಮವಾಗಿ ರಾಜಸ್ಥಾನ ರಾಯಲ್ಸ್ ವಿರುದ್ಧ 7ವಿಕೆಟ್ಗಳ ಗೆಲುವು ಸಾಧಿಸಿ, ತಂಡವನ್ನ ಫೈನಲ್ಗೆ ತೆಗೆದುಕೊಂಡು ಹೋಗಿದ್ದಾರೆ.
ಪಂದ್ಯ ಮುಗಿದ ಬಳಿಕ ವರ್ಚುಯಲ್ ಮಾಧ್ಯಮ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿರುವ ಹಾರ್ದಿಕ್ ಪಾಂಡ್ಯ, ನನ್ನ ಹೆಸರು ಯಾವಾಗಲೂ ಕೇಳಿ ಬರುತ್ತಲೇ ಇರುತ್ತದೆ. ಆದರೆ, ಯಾವುದಕ್ಕೂ ನಾನು ತಲೆಕೆಡಿಸಿಕೊಂಡಿಲ್ಲ. ನಗುಮುಖದಿಂದಲೇ ಎಲ್ಲದಕ್ಕೂ ಉತ್ತರ ನೀಡಿದ್ದೇನೆ ಎಂದರು. ನಿಸ್ಸಂಶಯವಾಗಿ ಮಹಿ ಭಾಯ್ ನನ್ನ ವೃತ್ತಿ ಜೀವನದಲ್ಲಿ ದೊಡ್ಡ ಪಾತ್ರ ನಿರ್ವಹಿಸಿದ್ದಾರೆ. ಅವರು ನನಗೆ ಆತ್ಮೀಯ ಸಹೋದರ, ಸ್ನೇಹಿತ ಮತ್ತು ಕುಟುಂಬ ಸದಸ್ಯ ಎಂದು ಹೇಳಿಕೊಂಡಿದ್ದಾರೆ. ಅವರಿಂದ ಬಹಳಷ್ಟು ವಿಷಯಗಳನ್ನ ನಾನು ಕಲಿತಿದ್ದೇನೆ. ಎಲ್ಲ ಸಂದರ್ಭಗಳಲ್ಲಿ ಕೂಲ್ ಆಗಿ ಇರುವುದನ್ನೂ ಅವರಿಂದ ಕಲಿತುಕೊಂಡಿದ್ದೇನೆ ಎಂದು ಹೇಳಿದರು.
2019ರಲ್ಲಿ ಕಾಫಿ ವಿತ್ ಕರಣ್ ಶೋ ನಲ್ಲಿ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕಾಗಿ ಪಾಂಡ್ಯ ವಿರುದ್ಧ ಬಿಸಿಸಿಐ ಕ್ರಮ ಕೈಗೊಂಡಿತ್ತು. ಆದರೆ, ವಿಚಾರಣಾ ಸಮಿತಿ ಎದುರು ಕ್ಷಮೆಯಾಚನೆ ಮಾಡಿದ ಬಳಿಕ, ತಂಡದಲ್ಲಿ ಅವಕಾಶ ನೀಡಲಾಗುತ್ತದೆ. 28 ವರ್ಷದ ಹಾರ್ದಿಕ್ ನವೆಂಬರ್ 8, 2021ರಲ್ಲಿ ವಿಶ್ವಕಪ್ನಲ್ಲಿ ನಡೆದ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.
ತದನಂತರ ಬೆನ್ನಿನ ಶಸ್ತ್ರಚಿಕಿತ್ಸೆಗೊಳಗಾಗಿ, ತಂಡದಿಂದ ಹೊರಬೀಳುತ್ತಾರೆ. ಮುಂಬೈ ಇಂಡಿಯನ್ಸ್ ತಂಡದಿಂದ ರಿಲೀಸ್ ಆದ ಹಾರ್ದಿಕ್ ಗುಜರಾತ್ ತಂಡಕ್ಕೆ 15 ಕೋಟಿ ರೂ.ಗೆ ಆಯ್ಕೆಯಾಗಿ, ತಂಡದ ನಾಯಕತ್ವ ವಹಿಸಿಕೊಳ್ಳುತ್ತಾರೆ. ಅದರ ಫಲವಾಗಿ ತಂಡ ಇದೀಗ ಫೈನಲ್ಗೆ ಲಗ್ಗೆ ಹಾಕಿದ್ದು, ಹಾರ್ದಿಕ್ ಪಾಂಡ್ಯ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.