ಮುಂಬೈ: ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿರುವ ಗುಜರಾತ್ ತಂಡ ಗೆಲುವಿನ ಅಲೆಯಲ್ಲಿದೆ. ಪಂದ್ಯದ ಬಳಿಕ ವಿಜಯದ ಬಗ್ಗೆ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, ನಮ್ಮ ತಂಡದ 23 ಆಟಗಾರರು ಅವರದೇ ಆದ ಆಲೋಚನೆ ಹೊಂದಿದ್ದಾರೆ. ಗೆಲುವು ಸಾಧಿಸುವುದೇ ತಂಡದ ಧ್ಯೇಯವಾಗಿರುತ್ತದೆ. ಹೀಗಾಗಿ ತಂಡ ಎಲ್ಲ ಸವಾಲುಗಳನ್ನು ಮೀರಿ ಫೈನಲ್ ತಲುಪಿದೆ ಎಂದು ಅಭಿಪ್ರಾಯಪಟ್ಟರು.
ನಾಯಕನಾಗಿ ನಾನು ಮೈದಾನದ ಒಳಗೆ ಮತ್ತು ಹೊರಗೆ ಸಮತೋಲನ ಕಾಪಾಡಿಕೊಳ್ಳಲು ಬಯಸುತ್ತೇನೆ. ನಾಯಕನಾಗಿ ನಾನು ಸಾಕಷ್ಟು ಕಲಿಯುತ್ತಿದ್ದೇನೆ. ಕಳೆದ ಕೆಲವು ವರ್ಷಗಳಿಂದ ನನ್ನ ಜೀವನದಲ್ಲಿ ಆಗಿರುವ ಬದಲಾವಣೆಗಳನ್ನು ಸರಿದೂಗಿಸಿಕೊಂಡು ಮುನ್ನಡೆಯುತ್ತಿದ್ದೇನೆ ಎಂದರು.
ಐಪಿಎಲ್ನಲ್ಲಿ ನಾಯಕನಾಗಿ ನಾನು ಮತ್ತು ತಂಡ ಪದಾರ್ಪಣೆ ಮಾಡಿದ್ದೇವೆ. ಈ ಋತುವಿನಲ್ಲಿ ನನ್ನ ಕುಟುಂಬ ಪ್ರಮುಖ ಪಾತ್ರ ವಹಿಸಿದೆ. ನನ್ನ ಪತ್ನಿ, ಮಗ, ಸಹೋದರ ಸೇರಿದಂತೆ ಎಲ್ಲರೂ ಬೆಂಬಲ ನೀಡಿದರು. ಅದಕ್ಕಾಗಿಯೇ ನಾನು ಯಾವುದೇ ಪರಿಸ್ಥಿತಿಯಲ್ಲಿ ಸ್ಥಿರವಾಗಿರಲು ಸಾಧ್ಯವಾಗಿದೆ. ಸೀಸನ್ ಮುಗಿದ ಮೇಲೆ ಮನೆಗೆ ಹೋಗಿ ಕುಟುಂಬದವರ ಜೊತೆ ಕಾಲ ಕಳೆಯಬೇಕು. ಅದು ನನ್ನನ್ನು ಅತ್ಯುತ್ತಮ ಕ್ರಿಕೆಟಿಗನನ್ನಾಗಿ ಮಾಡುತ್ತದೆ ಎಂದು ಪಾಂಡ್ಯಾ ಹೇಳಿದ್ದಾರೆ.
ಗುಜರಾತ್ ಫೈನಲ್ ತಲುಪಿದ ಬಗ್ಗೆ ಕೇಳಿಬಂದ ಪ್ರಶ್ನೆಗೆ ಉತ್ತರಿಸಿ, ಈಗ ಯಾವುದೇ ಭಾವನೆ ಹೊಂದದೇ, ಶಾಂತವಾಗಿರಲು ಪ್ರಯತ್ನಿಸುತ್ತಿದ್ದೇನೆ. ಈ ಅದ್ಭುತ ಯಶಸ್ಸು ಸಾಧಿಸುವುದರ ಹಿಂದೆ ತಂಡದ ಎಲ್ಲ ಸದಸ್ಯರ ಶ್ರಮ ಅಪಾರವಾಗಿದೆ. ಡ್ರೆಸ್ಸಿಂಗ್ ಕೋಣೆ ಅದ್ಭುತವಾಗಿದೆ. ಹೀಗಾಗಿ ತಂಡ ಗೆಲುವು ಸಾಧಿಸುತ್ತಿದೆ ಎಂದಿದ್ದಾರೆ.
ರಶೀದ್ ಖಾನ್ ಋತುವಿನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಡೇವಿಡ್ ಮಿಲ್ಲರ್ ಒಬ್ಬ ಏಕಾಂಗಿ ಹೋರಾಟಗಾರ. ಮಿಲ್ಲರ್ ಪ್ರದರ್ಶನದ ಬಗ್ಗೆ ನನಗೆ ಹೆಮ್ಮೆ ಇದೆ. ನಾನೀಗ ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸಿದ್ಧವಾಗಿದ್ದೇನೆ ಎಂದು ಹಾರ್ದಿಕ್ ಹೇಳಿದ್ದಾರೆ.
ನಿನ್ನೆ (ಮೇ 24) ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 6 ವಿಕೆಟ್ ನಷ್ಟಕ್ಕೆ 188 ಬೃಹತ್ ಸ್ಕೋರ್ ಗಳಿಸಿತ್ತು. ಇದಕ್ಕುತ್ತರವಾಗಿ ಗುಜರಾತ್ನ ಡೇವಿಡ್ ಮಿಲ್ಲರ್, ನಾಯಕ ಹಾರ್ದಿಕ್ ಪಾಂಡ್ಯ, ಶುಭ್ಮನ್ ಗಿಲ್ರ ಸಿಡಿಲಬ್ಬರದ ಆಟದಿಂದಾಗಿ 19.3 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿ ಫೈನಲ್ ಪ್ರವೇಶಿಸಿದೆ. ಇನ್ನು ಇಂದು ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಮತ್ತು ಲಖನೌ ಸೂಪರ್ಜೈಂಟ್ಸ್ ತಂಡಗಳು ಎದುರಾಗಲಿವೆ.
ಓದಿ: ರಾಜಸ್ಥಾನ ವಿರುದ್ಧ 7 ವಿಕೆಟ್ಗಳ ಜಯ... ಫೈನಲ್ಗೆ ಎಂಟ್ರಿಕೊಟ್ಟ ಗುಜರಾತ್ ಟೈಟನ್ಸ್