ಅಹಮದಾಬಾದ್: ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಗೆಲುವು ದಾಖಲು ಮಾಡುವುದರೊಂದಿಗೆ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡಿದೆ. ಟೂರ್ನಿಯಲ್ಲಿ ವಿವಿಧ ತಂಡದ ಪ್ಲೇಯರ್ಸ್ ಮಹತ್ವದ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿನೇಶ್ ಕಾರ್ತಿಕ್ ಕೂಡ 'ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್' ಅವಾರ್ಡ್ ಗಿಟ್ಟಿಸಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ತಾವು ಆಡಿರುವ 16 ಪಂದ್ಯಗಳಿಂದ 183.33ರ ಸ್ಟ್ರೈಕ್ ರೇಟ್ನಲ್ಲಿ 330ರನ್ಗಳಿಕೆ ಮಾಡಿದ್ದಾರೆ. ವಿಶೇಷ ಎಂದರೆ 10 ಪಂದ್ಯಗಳಲ್ಲಿ ಅವರು ನಾಟ್ಔಟ್ ಆಗಿ ಉಳಿದಿದ್ದು, ಒಂದು ಪಂದ್ಯದಲ್ಲಿ ಅರ್ಧಶತಕ ಸಹ ಸಿಡಿಸಿದ್ದಾರೆ.
ಇದನ್ನೂ ಓದಿ: IPL 2022: ಜೋಸ್ ಬಟ್ಲರ್ ಮುಡಿಗೆ 6 ವಿಶೇಷ ಪ್ರಶಸ್ತಿ! ಯಾರಿಗೆ ಏನೆಲ್ಲ ಗೌರವ?
2022ರ ಐಪಿಎಲ್ನಲ್ಲಿ ವಿಭಿನ್ನ ಶೈಲಿಯ ಬ್ಯಾಟಿಂಗ್ನಲ್ಲಿ ಮಿಂಚು ಹರಿಸಿದ ದಿನೇಶ್ ಕಾರ್ತಿಕ್, ಆರ್ಸಿಬಿ ಪರ ಫಿನಿಶರ್ ಪಾತ್ರ ನಿಭಾಯಿಸಿದ್ದು, ತಮಗೆ ಸಿಕ್ಕ ಪ್ರತಿಯೊಂದು ಅವಕಾಶದಲ್ಲೂ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ. ಇದೇ ಕಾರಣಕ್ಕಾಗಿ 2022ರ ಐಪಿಎಲ್ನಲ್ಲಿ ಅತ್ಯುತ್ತಮ ಸ್ಟ್ರೈಕರ್ ಎಂಬ ಪ್ರಶಸ್ತಿಗೆ ಪಾತ್ರರಾಗಿ, ಇದೀಗ ಬಹುಮಾನವಾಗಿ ಕಾರು ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ದಿನೇಶ್ ಕಾರ್ತಿಕ್ಗೆ ಟಾಟಾ ಪಂಚ್ ಕಾರ್ ನೀಡಲಾಗಿದ್ದು, ಫೈನಲ್ ಪಂದ್ಯದ ವೇಳೆ ಕಾರ್ತಿಕ್ ಬದಲಾಗಿ, ಹಾರ್ದಿಕ್ ಪಾಂಡ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ದಿನೇಶ್ ಕಾರ್ತಿಕ್, ಜೂನ್ 9 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಳ್ಳಲಿರುವ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಅವರು ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ಗೆ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗ್ತಿದೆ.