ಏಷ್ಯಾ ಕಪ್ಗೆ ಇನ್ನೂ ನಾಲ್ಕು ತಿಂಗಳು ಬಾಕಿ ಇದ್ದರೂ ಎಲ್ಲಿ ಆಯೋಜನೆಗೊಳ್ಳಲಿದೆ ಎಂಬುದರ ಕಗ್ಗಂಟು ಇನ್ನೂ ಬಿಡಿಸಲಾಗಿಲ್ಲ. ಪಾಕಿಸ್ತಾನದ ಮಾಧ್ಯಮಗಳಲ್ಲಿ ಪ್ರಸ್ತಾಪಿತ ಹೈಬ್ರಿಡ್ ಮಾದರಿಯಲ್ಲೇ ಪಂದ್ಯಾವಳಿಗಳು ನಡೆಯಲಿದೆ ಎಂದು ವರದಿಗಳನ್ನು ಮಾಡಲಾಗುತ್ತಿದೆ. ಆದರೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಕುರಿತು ಪ್ರಕಟಣೆಯನ್ನು 16ನೇ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಫೈನಲ್ ನಂತರ ನೀಡಲಾಗುವುದು ಎಂದು ಹೇಳಿದೆ. ಬಿಸಿಸಿಐ 28 ರಂದು ನಡೆಯಲಿರುವ ಐಪಿಎಲ್ ಫೈನಲ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ), ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮುಖ್ಯಸ್ಥರನ್ನು ಆಹ್ವಾನಿಸಿದೆ. ಈ ವೇಳೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆ ನಡೆಸಿ ನಂತರ ಘೋಷಣೆಯಾಗಬಹುದು ಎಂದು ತಿಳಿದು ಬಂದಿದೆ.
"ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಗಳ ಆಯಾ ಅಧ್ಯಕ್ಷರು ಮೇ 28 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಟಾ ಐಪಿಎಲ್ 2023 ಫೈನಲ್ ಅನ್ನು ಅಲಂಕರಿಸಲಿದ್ದಾರೆ. ಏಷ್ಯಾಕ್ಕೆ ಸಂಬಂಧಿಸಿದಂತೆ ಭವಿಷ್ಯದ ಕ್ರಮ ವಿವರಿಸಲು ನಾವು ಅವರೊಂದಿಗೆ ಚರ್ಚೆ ನಡೆಸುತ್ತೇವೆ. ಕಪ್ 2023," ಎಂದು ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಜಯ್ ಶಾ ತಿಳಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯ ಪಂದ್ಯವನ್ನು ಶ್ರೀಲಂಕಾದಲ್ಲಿ ಆಯೋಜಿಸುವ ಚಿಂತನೆಯಲ್ಲಿ ಎಸಿಸಿ ಇದೆ ಎನ್ನಲಾಗಿದೆ. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಸುವ ಹೈಬ್ರಿಡ್ ಮಾದರಿಯ ಪಂದ್ಯದ ಪ್ರಸ್ತಾಪವನ್ನು ಎಸಿಸಿ ಮುಂದೆ ಇಟ್ಟಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ದುಬೈನಲ್ಲಿ ತಾಪಮಾನ ಹೆಚ್ಚಿರುವುದರಿಂದ ಏಕದಿನ ಮಾದರಿಯ ಕ್ರಿಕೆಟ್ ಆಡುವುದು ಕಷ್ಟ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಲಂಕಾಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ಆದರೆ, ಶ್ರೀಲಂಕಾದಲ್ಲಿ ಆಯೋಜನೆ ಮಾಡುವುದಕ್ಕಿಂತ ದುಬೈನಲ್ಲಿ ಮಾಡಿದರೆ ಪ್ರಯಾಣ ಹಾಗೂ ಸರಂಜಾಮು ಸಾಗಣೆ ದೃಷ್ಟಿಯಿಂದ ಸೂಕ್ತ ಎಂಬ ಚಿಂತನೆಯೂ ಎಸಿಸಿ ಮುಂದಿದೆ. ಹೀಗಾಗಿ ಈ ಬಗ್ಗೆ ಐಪಿಎಲ್ ನಂತರ ಸಭೆ ನಡೆಸಿ ಎಸಿಸಿ ಅಧ್ಯಕ್ಷ ಜಯ್ ಶಾ ತಿರ್ಮಾನ ತಿಳಿಸಲಿದ್ದಾರೆ.
ಏಷ್ಯಾ ಕಪ್ ಟೂರ್ನಿಯು ಸಪ್ಟೆಂಬರ್ 1 ರಿಂದ 17ರವರೆಗೆ ಆಯೋಜನೆಗೊಂಡಿದೆ. ಇದರಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಆಫ್ಗಾನಿಸ್ತಾನ ಹಾಗೂ ನೇಪಾಳ ತಂಡಗಳು ಆಡಲಿವೆ. ’ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ ಆಗಿರುವ ಜಯ್ ಶಾ ಸದಸ್ಯ ರಾಷ್ಟ್ರಗಳ ಸಭೆಯನ್ನು ಕರೆಯಲಿದ್ದಾರೆ. ಅದರಲ್ಲಿ ತೀರ್ಮಾನ ತೆಗೆದುಕೊಂಡ ನಂತರವಷ್ಟೇ ಎಲ್ಲವೂ ಸ್ಪಷ್ಟವಾಗಲಿದೆ‘ ಎಂದು ಮೂಲಗಳು ವರದಿ ಮಾಡಿವೆ.
ಇದನ್ನೂ ಓದಿ: IPL 2023 ಕ್ವಾಲಿಫೈಯರ್ 2: ಮುಂಬೈ - ಗುಜರಾತ್ ಸೆಮೀಸ್ ಫೈಟ್, ಗೆದ್ದವರಿಗೆ ಫೈನಲ್ ಟಿಕೆಟ್..