ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ನ ಮುಂದಿನ ಐದು ವರ್ಷಗಳ ಪ್ರಸಾರದ ಹಕ್ಕು ಮಾರಾಟದ ಪ್ರಕ್ರಿಯೆ ನಾಳೆ-ನಾಡಿದ್ದು ನಡೆಯಲಿದೆ. ಈ ರೇಸ್ನಿಂದ ಈಗಾಗಲೇ ಅಮೆಜಾನ್ ಹೊರಬಿದ್ದಿದೆ. ಸದ್ಯ ಸೋನಿ, ಸ್ಟಾರ್, ಜೀ ಸೇರಿದಂತೆ ಕೆಲವೊಂದು ಕಂಪನಿಗಳು ಸ್ಪರ್ಧೆಯಲ್ಲಿವೆ. ಭಾರತೀಯ ಕ್ರಿಕೆಟ್ ಮಂಡಳಿ ಇ-ಹರಾಜು ಮೂಲಕ ಪ್ರಸಾರದ ಹಕ್ಕು ಮಾರಾಟ ಮಾಡಲಿದ್ದು, ಈ ರೇಸ್ನಿಂದ ಇ-ಕಾಮರ್ಸ್ ದೈತ್ಯ ಕಂಪನಿ ಅಮೆಜಾನ್ ಹೊರಬಿದ್ದಿದೆ ಎಂದು ಬಿಸಿಸಿಐ ತಿಳಿಸಿದೆ.
ಇದೀಗ ರೇಸ್ನಲ್ಲಿ ಸ್ಟಾರ್ ಇಂಡಿಯಾ, ಜೀ ಎಂಟರ್ಟೈನ್ಮೆಂಟ್, ರಿಲಯನ್ಸ್ Viacom18, ಸೋನಿ ಗ್ರೂಪ್, ಡ್ರಿಮ್ 11, ಆ್ಯಪಲ್ ಇನ್, ಸೂಪರ್ ಸ್ಪೋರ್ಟ್ಸ್ ಭಾಗಿಯಾಗಲಿವೆ. 2017ರ ಬಿಡ್ಡಿಂಗ್ ವೇಳೆ 16,347 ಕೋಟಿ ರೂಪಾಯಿ ನೀಡುವ ಮೂಲಕ ಸ್ಟಾರ್ ಇಂಡಿಯಾ ಹಕ್ಕು ಖರೀದಿಸಿತ್ತು. ಈ ಸಲದ ಮೂಲ ಬೆಲೆ 32,890 ಕೋಟಿ ರೂಪಾಯಿ ಆಗಿದ್ದು, ಮೂಲಗಳ ಪ್ರಕಾರ ಬಿಡ್ಡಿಂಗ್ 45,000 ಕೋಟಿ ರೂ. ಗಡಿ ದಾಟುವ ಸಾಧ್ಯತೆ ಇದೆ.
ನಾಳೆ-ನಾಡಿದ್ದು ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ 2023-27ರ ಅವಧಿಯ ಐಪಿಎಲ್ ಪ್ರಸಾರದ ಹಕ್ಕು ಪಡೆಯಲು ಬಿಡ್ ನಡೆಸಲಿದೆ. ಟಿವಿ ಹಕ್ಕು ಮೂಲ ಬೆಲೆಗಿಂತ ಕನಿಷ್ಠ ಶೇ.20ರಿಂದ 25ರಷ್ಟು ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆ ಇದ್ದು, ಡಿಜಿಟಲ್ ಹಕ್ಕು ಇನ್ನೂ ಹೆಚ್ಚಿನ ಮೊತ್ತಕ್ಕೆ ಹರಾಜಾಗಲಿದೆ ಎಂದು ತಿಳಿದುಬಂದಿದೆ. 2023-2027ರ ಅವಧಿಯಲ್ಲಿ ಆರಂಭದಲ್ಲಿ 74 ಪಂದ್ಯಗಳು ನಡೆಯಲಿದ್ದು, ನಂತರ ಇದನ್ನ 94 ಪಂದ್ಯಗಳಿಗೆ ಏರಿಕೆ ಮಾಡುವ ನಿರೀಕ್ಷೆ ಬಿಸಿಸಿಐ ಮುಂದಿದೆ.