ಮುಂಬೈ: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಹೀನಾಯ ಪ್ರದರ್ಶನ ತೋರಿರುವ ಮುಂಬೈ ಇಂಡಿಯನ್ಸ್ ಈಗಾಗಲೇ 15ನೇ ಆವೃತ್ತಿಯಿಂದ ಹೊರಬಿದ್ದಿದೆ. ಟೂರ್ನಿಯಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿರುವ 5 ಬಾರಿಯ ಚಾಂಪಿಯನ್ ತಂಡ ಕನ್ನಡಿಗ ಕೆ.ಎಲ್.ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಭಾನುವಾರ ಕಣಕ್ಕಿಳಿಯುತ್ತಿದೆ.
ಐಪಿಎಲ್ನಲ್ಲಿ ಮೊದಲ 7 ಪಂದ್ಯಗಳಲ್ಲೂ ಸೋಲು ಕಂಡ ಏಕೈಕ ತಂಡವಾಗಿರುವ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿದೆ ಆದರೂ ಟೂರ್ನಿಯಲ್ಲಿ ಉಳಿದಿರುವ ಇನ್ನುಳಿದ 7 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವುದಕ್ಕೆ ಒಂದು ಗೆಲುವು ಅಗತ್ಯವಾಗಿದೆ.
ಭಾನುವಾರ ತನ್ನ ನೆಚ್ಚಿನ ಸ್ಟೇಡಿಯಂ ವಾಂಖೆಡೆಯಲ್ಲಿ ಮುಂಬೈ ಮೊದಲ ಪಂದ್ಯವನ್ನಾಡುತ್ತಿದೆ. ಎದುರಾಳಿ ಲಖನೌ ಸೂಪರ್ ಜೈಂಟ್ಸ್ ಏಳು ಪಂದ್ಯಗಳಿಂದ 8 ಅಂಕ ಪಡೆದು 5ನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಪ್ರವೇಶ ಖಚಿತಗೊಳಿಸುವುದಕ್ಕೆ ಎದುರು ನೋಡುತ್ತಿದೆ. ಈಗಾಗಲೇ ಮುಂಬೈ ವಿರುದ್ಧ ಈ ಆವೃತ್ತಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಲಖನೌ ಈ ಪಂದ್ಯದಲ್ಲೂ ಗೆಲುವನ್ನು ಎದುರುನೋಡುತ್ತಿದೆ.
ಮುಂಬೈ ಇದುವರೆಗೂ ಆಡಿರುವ ಪಂದ್ಯಗಳಲ್ಲಿ ಆರಂಭಿಕರಾದ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಉತ್ತಮ ಸ್ಟಾರ್ಟ್ ನೀಡಲು ವಿಫಲರಾಗಿದ್ದಾರೆ. ಇಶಾನ್ ಮೊದಲೆರಡು ಪಂದ್ಯಗಳಲ್ಲಿ ಮಿಂಚಿದರಾದರೂ ನಂತರ ವಿಫಲರಾದರು. ಆದರೆ ರೋಹಿತ್ ಮಾತ್ರ ಎಲ್ಲಾ ಪಂದ್ಯಗಳಲ್ಲೂ ವಿಫಲರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೇವಿಸ್ ಮತ್ತು ತಿಲಕ್ ವರ್ಮಾ ಮಾತ್ರ ತಂಡಕ್ಕೆ ತಕ್ಕಮಟ್ಟಿಗೆ ನೆರವಾಗುತ್ತಿದ್ದಾರೆ. ಆದರೆ ಪಂದ್ಯ ಗೆಲ್ಲಿಸಲು ಸಾಧ್ಯವಾಗುತ್ತಿಲ್ಲ. ಮುಂಬೈನ ಮಧ್ಯಮ ಕ್ರಮಾಂಕದ ಬಲವಾಗಿದ್ದ ಆಲ್ರೌಂಡರ್ ಪೊಲಾರ್ಡ್ ಕೂಡ ತಮ್ಮ ನೈಜ ಆಟವನ್ನು ತೋರಿಸಿಲ್ಲ. ಬೌಲಿಂಗ್ ವಿಭಾಗವಂತೂ ಸಂಪೂರ್ಣ ನೆಲಕಚ್ಚಿದೆ. ಆದರೆ ಸಿಎಸ್ಕೆ ವಿರುದ್ಧ ಬೌಲಿಂಗ್ ತಕ್ಕಮಟ್ಟಿನ ಯಶಸ್ಸು ನೀಡಿರುವುದರಿಂದ ಮುಂದಿನ ಪಂದ್ಯಗಳಲ್ಲಿ ಕೆಲವು ಬದಲಾವಣೆ ಮಾಡಿಕೊಂಡು ಕಣಕ್ಕಿಳಿಯುವ ಸಾಧ್ಯತೆಯಿದೆ.
ರಾಹುಲ್-ಡಿಕಾಕ್ರಂತಹ ಸ್ಫೋಟಕ ಆರಂಭಿಕರನ್ನು ಹೊಂದಿರುವ ಲಖನೌಗೆ ಮಧ್ಯಮ ಕ್ರಮಾಂಕ ಸೂಕ್ತ ಬೆಂಬಲ ನೀಡುತ್ತಿಲ್ಲ. ಡಿಕಾಕ್ ಸ್ಥಿರ ಪ್ರದರ್ಶನದ ಕೊರತೆ ಅನುಭವಿಸುತ್ತಿದ್ದರೆ, ಮನೀಶ್ ಪಾಂಡೆ ಪಂದ್ಯದಿಂದ ಪಂದ್ಯಕ್ಕೆ ಪ್ರದರ್ಶನದಲ್ಲಿ ಕುಸಿತ ಅನುಭವಿಸುತ್ತಿದ್ದಾರೆ. ಸಕಾರಾತ್ಮಕ ಅಂಶವೆಂದರೆ, ಬೌಲಿಂಗ್ ಘಟಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಮಧ್ಯಮ ಕ್ರಮಾಂಕವನ್ನು ಮಾತ್ರ ಸರಿಪಡಿಸಿಕೊಂಡರೆ ರಾಹುಲ್ ಪಡೆಗೆ ಮತ್ತೊಂದು ಜಯ ಸುಲಭವಾಗಲಿದೆ.
ಇದನ್ನೂ ಓದಿ: 100ರೊಳಗೆ ಬೆಂಗಳೂರು ಆಲೌಟ್, ಆರ್ಸಿಬಿಗಿಂತಲೂ ಕಳಪೆ ದಾಖಲೆ ಹೊಂದಿದ ತಂಡಗಳಿವು..