ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಕೆಲವು ಫ್ರಾಂಚೈಸಿಗಳು ತಮ್ಮ ಹರಾಜಿನಲ್ಲಿ ಖರೀದಿಸುವುದಾಗಿ ಭರವಸೆ ನೀಡಿ ದ್ರೋಹ ಮಾಡಿದವು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
2021ರ ಐಪಿಎಲ್ನಲ್ಲಿ ಪರ್ಪಲ್ ಕ್ಯಾಪ್ ಪಡೆದಿದ್ದ ಹರ್ಷಲ್ ಅವರನ್ನು ವೃತ್ತಿ ಜೀವನದ ಆರಂಭದ ದಿನಗಳಲ್ಲಿ ವಿವಿಧ ಫ್ರಾಂಚೈಸಿಗಳಿಂದ ಮೂರು-ನಾಲ್ಕು ಜನರು ಅವರನ್ನು ಸಂಪರ್ಕಿಸಿ, ಬಿಡ್ ಮಾಡುವುದಾಗಿ ಹೇಳಿದರು. ಆದಾಗ್ಯೂ, ಅವರು ಹರಾಜಿನ ದಿನದಂದು ತಮ್ಮ ಮಾತು ತಪ್ಪಿದರೆಂದು ಗೌರವ್ ಕಪೂರ್ ನಡೆಸಿಕೊಡುವ ಬ್ರೇಕ್ಫಾಸ್ಟ್ ವಿತ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ.
"ವಿಪರ್ಯಾಸವೆಂದರೆ, ವಿವಿಧ ಫ್ರಾಂಚೈಸಿಗಳ ಮೂರು-ನಾಲ್ಕು ಜನರು ನನಗೆ ಕರೆ ಮಾಡಿ, ನಿಮಗಾಗಿ ಬಿಡ್ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಹರಾಜಿನ ದಿನದಂದು ಯಾರೂ ಬಿಡ್ ಮಾಡಲಿಲ್ಲ. ಆ ಸಮಯದಲ್ಲಿ ನನಗೆ ಅವರ ನಡೆ ದ್ರೋಹ ಬಗೆದಂತೆ ಭಾಸವಾಯಿತು. ಅವರೆಲ್ಲರು ನನಗೆ ಸುಳ್ಳು ಹೇಳಿದ್ದಾರೆ, ಮೋಸ ಮಾಡಿದ್ದಾರೆ ಎಂದು ಅನಿಸಿತು " ಎಂದು ಹರ್ಷಲ್ ಹೇಳಿಕೊಂಡಿದ್ದಾರೆ.
ಮುಂದುವರಿಸಿದ 31 ವರ್ಷ ವಯಸ್ಸಿನ ವೇಗಿ, ಆ ವೇಳೆ ಅವರೆಲ್ಲರ ನಡೆಯಿಂದ ನನ್ನನ್ನು ಕತ್ತಲೆಯ ಕೂಪಕ್ಕೆ ತಳ್ಳಿತ್ತು. ಮತ್ತು ಅದರಿಂದ ಹೊರಬರುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಂಡಿತು ಎಂದಿದ್ದಾರೆ. ಕಳೆದ ವರ್ಷ, ಬಲಗೈ ವೇಗಿ 15 ಪಂದ್ಯಗಳಿಂದ 32 ವಿಕೆಟ್ ಪಡೆದು 14ನೇ ಋತುವಿನ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. 10.75 ಕೋಟಿಗೆ ಮತ್ತೆ ಆರ್ಸಿಬಿ ಸೇರಿರುವ ಹರ್ಷಲ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಆವೃತ್ತಿಯಲ್ಲಿ ಎಂಟು ಪಂದ್ಯಗಳಿಂದ ಒಂಬತ್ತು ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ:ಈ ಯುವಕ ಐಪಿಎಲ್ನ ಶ್ರೇಷ್ಠ ಡೆತ್ ಬೌಲರ್: ಕಗಿಸೋ ರಬಾಡ ಮೆಚ್ಚುಗೆ