ಮುಂಬೈ: ಇನ್ನು 2021ರ ಐಪಿಎಲ್ ಮುಗಿದಿಲ್ಲ, ಆದರೆ ಬಿಸಿಸಿಐ ಈಗಲೇ 2022ರ ಐಪಿಎಲ್ಗೆ ಎಲ್ಲಾ ಸಿದ್ಧತೆ ನಡೆಸಿದೆ. ಮಂಗಳವಾರ 15ನೇ ಆವೃತ್ತಿಗೆ ಎರಡು ಹೊಸ ತಂಡಗಳ ಸೇರ್ಪಡೆಗೆ ಬಿಡ್ಡಿಂಗ್ ಕರೆದಿದ್ದು, ಐಪಿಎಲ್ನ ಭಾಗವಾಗುವ ತಂಡಗಳಿಗೆ 2000 ಕೋಟಿ.ರೂ ಮೂಲಬೆಲೆ ನಿಗದಿ ಮಾಡಿದೆ. ಈ ಮೂಲಕ ಬಿಸಿಸಿಐ(BCCI) ಅಂದಾಜು 5000 ಕೋಟಿ ರೂ. ಆದಾಯ ಗಳಿಸುವ ಸಾಧ್ಯತೆಯಿದೆ.
ಪ್ರಸ್ತುತ ಐಪಿಎಲ್ನಲ್ಲಿ 8 ತಂಡಗಳು ಭಾಗವಹಿಸುತ್ತಿವೆ. ಮುಂದಿನ ಆವೃತ್ತಿಯಿಂದ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆ 10ಕ್ಕೇರಲಿವೆ ಎಂದು ಇತ್ತೀಚೆಗೆ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈಗಾಗಲೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ ಮುಂದಿನ ಬಾರಿ ಮೆಗಾ ಹರಾಜು ನಡೆಯುವುದರಿಂದ ಹೊಸ ಎರಡು ತಂಡಗಳ ಸೇರ್ಪಡೆ ಮಂಗಳವಾರ ಬಿಸಿಸಿಐ ಬಿಡ್ಡಿಂಗ್ ಆಹ್ವಾನ ನೀಡಿದೆ. ಈ ಟೆಂಡರ್ ಅಕ್ಟೋಬರ್ 5ರವರೆಗೆ ಇರಲಿದ್ದು, ತಂಡದ ಮೂಲಬೆಲೆಯನ್ನು 2000 ಕೋಟಿ ರೂಪಾಯಿ ನಿಗದಿಮಾಡಿದೆ.
ಯಾವುದೇ ಕಂಪನಿ ಬಿಡ್ನಲ್ಲಿ ಪಾಲ್ಗೊಳ್ಳಬೇಕಾದರೆ 10 ಲಕ್ಷ ರೂಪಾಯಿ ನೀಡಿ ಬಿಡ್ ದಾಖಲಾತಿಯನ್ನು ಖರೀದಿಸಬಹುದುದಾಗಿದೆ. ಈ ಮೊತ್ತಕ್ಕೆ ಮರುಪಾವತಿ ಇರುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಈ 2 ಹೊಸ ತಂಡಗಳ ಮೂಲ ಬೆಲೆಯನ್ನು ಮೊದಲು 1700 ಕೋಟಿ ರೂ. ನಿಗದಿ ಮಾಡಲಾಗಿತ್ತು. ಆದರೆ ನಂತರ 2000 ಕೋಟಿಗೆ ಏರಿಸಲಾಯಿತು ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಐಪಿಎಲ್ನ ಹಣಕಾಸಿನ ವ್ಯವಸ್ಥೆಯ ಕಾರ್ಯನಿರ್ವಹಣೆ ಬಗ್ಗೆ ಮೂಲಗಳು ತಿಳಿಸಿರುವ ಮಾಹಿತಿಯ ಪ್ರಕಾರ ಐಪಿಎಲ್ನಲ್ಲಿ ತಂಡಗಳನ್ನು ಖರೀದಿಸಲು ಬೃಹತ್ ವ್ಯಾಪರೋದ್ಯಮಿಗಳು ಆಸಕ್ತಿ ತೋರಿಸುತ್ತಿದ್ದಾರೆ. ಹಾಗಾಗಿ ಈ ಎರಡು ತಂಡಗಳ ಮಾರಾಟದಿಂದ ಸರಿಸುಮಾರು 5000 ಕೋಟಿ ರೂಪಾಯಿಗಳ ಆದಾಯದ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದ್ದಾರೆ.
ಲೀಗ್‌ನಲ್ಲಿ ಫ್ರಾಂಚೈಸಿಯನ್ನು ಪಡೆದುಕೊಳ್ಳಲು ಕನಿಷ್ಠ 3000 ಕೋಟಿ ರೂಪಾಯಿಯ ವಾರ್ಷಿಕ ವಹಿವಾಟು ಹೊಂದಿರುವ ಕಂಪನಿಗಳಿಗ ಆದ್ಯತೆ ನೀಡಲಾಗುತ್ತದೆ. ಆದರೆ ಮೂರು ಪ್ರತ್ಯೇಕ ಉದ್ಯಮ ಸಂಸ್ಥೆಗಳು ಜಂಟಿಯಾಗಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಮೂರಕ್ಕಿಂತ ಹೆಚ್ಚಿನ ಸಂಸ್ಥೆಗಳಿಗೆ ಜೊತೆಯಾಗಿ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ ಎಂದು ಬಿಸಿಸಿಐ ತಿಳಿಸಿದೆ ಎನ್ನಲಾಗ್ತಿದೆ.
ಅಹ್ಮದಾಬಾದ್, ಲಕ್ನೋ ಮತ್ತು ಪುಣೆ ನಗರಗಳು ಬಾಗಶಃ ಫ್ರಾಂಚೈಸಿಯಾಗಿ ಆಯ್ಕೆಯಾಗಬಹುದು ಎಂದು ತಿಳಿದುಬಂದಿದೆ.
ಇದನ್ನು ಓದಿ:ಜನವರಿ 13ರಿಂದ ರಣಜಿ ಟ್ರೋಫಿ ಆರಂಭ: ಒಂದೇ ಗುಂಪಿನಲ್ಲಿವೆ ಮುಂಬೈ, ಕರ್ನಾಟಕ, ಡೆಲ್ಲಿ