ಶಾರ್ಜಾ : ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಶೀಘ್ರದಲ್ಲೇ ಬೌಲಿಂಗ್ಗೆ ಮರಳಲಿದ್ದೇನೆ ಎಂದು ತಿಳಿಸಿದ್ದಾರೆ. ಆಯ್ಕೆ ಸಮಿತಿ ಮತ್ತು ಟೀಂ ಮ್ಯಾನೇಜ್ಮೆಂಟ್ ಪಾಂಡ್ಯ ಬೌಲಿಂಗ್ ಮಾಡದಿದ್ದರೆ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ ಎಂದು ಪರಿಗಣಿಸುವುದಿಲ್ಲ ಎನ್ನುವ ವರದಿಗಳು ಹೊರ ಬರುತ್ತಿದ್ದಂತೆ ಪಾಂಡ್ಯ ಈ ಸಕಾರಾತ್ಮಕ ಸುದ್ದಿ ನೀಡಿದ್ದಾರೆ.
ಡೆಲ್ಲಿ ಪಂದ್ಯಕ್ಕೂ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ಹಾರ್ದಿಕ್, ಆದಷ್ಟು ಬೇಗ ಬೌಲಿಂಗ್ ಮಾಡಲಿದ್ದೇನೆ. ಈಗಾಗಲೇ ಅದಕ್ಕಾಗಿ ಸಾಕಷ್ಟು ಪ್ರಯತ್ನ ನಡೆದಿದೆ ಎಂದು ತಿಳಿಸಿದ್ದಾರೆ. ಶುಕ್ರವಾರ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಹೇಲ ಜಯವರ್ದನೆ ಹಾರ್ದಿಕ್ಗೆ ಏಕೆ ಬೌಲಿಂಗ್ ನೀಡುತ್ತಿಲ್ಲ ಎಂದು ಕೇಳಿದ್ದಕ್ಕೆ, ಅವರು ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನವನ್ನು ತೋರಲು ವಿಫಲರಾಗುತ್ತಿದ್ದಾರೆ. ಹಾಗಾಗಿ, ಈ ಸಂದರ್ಭದಲ್ಲಿ ಅವರನ್ನು ಬೌಲಿಂಗ್ ಮಾಡಲು ಒತ್ತಾಯಿಸುವುದು ಅವರಿಗೆ ಮತ್ತಷ್ಟು ಒತ್ತಡವನ್ನುಂಟು ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.
ಆದರೆ, ಆಯ್ಕೆ ಸಮಿತಿ ಈಗಾಗಲೇ ಪಾಂಡ್ಯ ಬೌಲಿಂಗ್ ಮಾಡದಿರುವುದರ ಬಗ್ಗೆ ತಲೆಕೆಡಿಸಿಕೊಂಡಿದೆ. ಅದಕ್ಕಾಗಿ ಈಗಾಗಲೇ ಹಾರ್ದಿಕ್ ಒಂದು ವೇಳೆ ಬೌಲಿಂಗ್ ಮಾಡದಿದ್ದರೆ ವಿಶ್ವಕಪ್‌ನಲ್ಲಿ ಆಡುವ 11ರ ಬಳಗದಲ್ಲಿ ಅವರಿಗೆ ಅವಕಾಶ ನೀಡುವುದು ಕಷ್ಟ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.
ಪಾಂಡ್ಯ ಜೊತೆಗೆ ಯುವ ಆಟಗಾರರಾದ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಮತ್ತು ರಾಹುಲ್ ಚಹಾರ್ ಪ್ರದರ್ಶನ ಕೂಡ ಕಳಪೆಯಾಗಿದ್ದು, ಮೀಸಲು ಆಟಗಾರನಾಗಿರುವ ಶ್ರೇಯಸ್ ಅಯ್ಯರ್ ಹಾಗೂ ವಿಶ್ವಕಪ್ ತಂಡದಲ್ಲಿ ಅವಕಾಶವಂಚಿತರಾಗಿರುವ ಯುಜ್ವೇಂದ್ರ ಚಹಾಲ್ರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ಅಭಿಮಾನಿಗಳು ಬಿಸಿಸಿಐಗೆ ಮನವಿ ಮಾಡುತ್ತಿದ್ದಾರೆ. ಐಸಿಸಿ ಸೂಪರ್ 12 ತಂಡಗಳು ತಮ್ಮ ಅಂತಿಮ ತಂಡವನ್ನು ಖಚಿತಪಡಿಸಲು ಅಕ್ಟೋಬರ್ 16ರವರೆಗೆ ಅವಕಾಶ ನೀಡಿದ್ದು, ಬಿಸಿಸಿಐ ಇಷ್ಟರಲ್ಲಿ ಬಿಸಿಸಿಐ ಕೆಲವು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ.
ಇದನ್ನು ಓದಿ:ಕ್ರಿಸ್ಗೇಲ್ ಬಯೋಬಬಲ್ ಬಿಡಲು ಕಾರಣ ಬಿಚ್ಚಿಟ್ಟ ಪೀಟರ್ಸನ್