ದುಬೈ: 2021ರಲ್ಲಿ ಆರಂಭದಿಂದಲೂ ಅಗ್ರ 2 ಸ್ಥಾನ ಕಾಪಾಡಿಕೊಂಡು ಬಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೋಮವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ.
ಎರಡು ತಂಡಗಳು ಆಡಿರುವ 12 ಪಂದ್ಯಗಳಲ್ಲಿ 9 ಜಯ ಮತ್ತು 3 ಸೋಲು ಕಂಡು 18 ಅಂಕ ಪಡೆದುಕೊಂಡಿವೆ. ಆದರೆ, ರನ್ರೇಟ್ ಆಧಾರದ ಮೇಲೆ ಸಿಎಸ್ಕೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಈ ಪಂದ್ಯವನ್ನು ಗೆಲ್ಲುವ ತಂಡ ಅಗ್ರಸ್ಥಾನಕ್ಕೇರಲಿದ್ದು, ಫೈನಲ್ ಪ್ರವೇಶಿಸಿಲು ಎರಡು ಅವಕಾಶವನ್ನು ಪಡೆಯಲಿದೆ.
ಎರಡೂ ತಂಡಗಳು ಈ ವರ್ಷದ ಆವೃತ್ತಿಯಲ್ಲಿ ಮೊದಲು ಮುಖಾಮುಖಿಯಾಗಿದ್ದಾಗ ಡೆಲ್ಲಿ ತಂಡ ಜಯಬೇರಿ ಬಾರಿಸಿತ್ತು. 189ರನ್ಗಳ ಬೃಹತ್ ಗುರಿಯನ್ನು ಡೆಲ್ಲಿ ಸುಲಭವಾಗಿ ಚೇಸ್ ಮಾಡಿ ಜಯ ಸಾಧಿಸಿತ್ತು. ಇನ್ನು ಕಳೆದ ಪಂದ್ಯದಲ್ಲಿ ಸತತ 5 ಬಾರಿ ತಮ್ಮ ವಿರುದ್ಧ ಪ್ರಾಬಲ್ಯ ಸಾಧಿಸಿದ್ದ ಮುಂಬೈ ಇಂಡಿಯನ್ಸ್ ತಂಡವನ್ನು ಬಗ್ಗುಬಡಿದ ಆತ್ಮವಿಶ್ವಾಸದಲ್ಲಿ ಡೆಲ್ಲಿಯಿದೆ. ತಂಡದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ಸಮತೋಲನದಿಂದ ಇದ್ದು, ಸಿಎಸ್ಕೆಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.
ಇತ್ತ ಕಳೆದ ಯುಎಇಯಲ್ಲಿ ಸತತ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಶನಿವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ 190 ರನ್ಗಳ ಗುರಿ ನೀಡಿಯೂ ಸೋಲು ಕಂಡಿದೆ. ಹಾಗಾಗಿ ಡೆಲ್ಲಿ ವಿರುದ್ಧ ಮತ್ತೆ ಗೆಲುವಿನ ಹಳಿಗೆ ಮರಳಿ ತನ್ನ ಅಗ್ರಸ್ಥಾನ ಉಳಿಸಿಕೊಳ್ಳುವ ಉತ್ಸಾಹದಲ್ಲಿದೆ.
ಮುಖಾಮುಖಿ
2008ರಿಂದ 2021ರವರೆಗೆ ಎರಡೂ ತಂಡಗಳು 24 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಸಿಎಸ್ಕೆ 15ರಲ್ಲಿ ಹಾಗೂ ಡೆಲ್ಲಿ 9ರಲ್ಲಿ ಜಯ ಸಾಧಿಸಿದೆ. ಆದರೆ ಕಳೆದ 3 ಮುಖಾಮುಖಿಯಲ್ಲಿ ಡೆಲ್ಲಿ ತಂಡವೇ ಜಯ ಸಾಧಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕವಾಡ್, ಫಾಫ್ ಡು ಪ್ಲೆಸಿಸ್, ಮೊಯಿನ್ ಅಲಿ, ಅಂಬಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜೋಶ್ ಹಜಲ್‌ವುಡ್, ಸ್ಯಾಮ್ ಕುರ್ರನ್, ದೀಪಕ್ ಚಹರ್
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್ ಧವನ್, ಸ್ಟೀವ್ ಸ್ಮಿತ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಶಿಮ್ರಾನ್ ಹೆಟ್ಮಾಯರ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಕಗಿಸೋ ರಬಾಡಾ, ಅನ್ರಿಚ್ ನಾರ್ಟ್ಜ್(ನೋಕಿಯಾ), ಆವೇಶ್ ಖಾನ್