ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಎರಡನೇ ಪಂದ್ಯದಲ್ಲಿ ಅಂಪೈರ್ ಎಡವಟ್ಟು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಅಂತಹದ್ದೇ ವಿವಾದಗಳು ಮುಂದುವರಿದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದ ವೇಳೆ ನಡೆದ ಘಟನೆ ಚರ್ಚೆಗೆ ಗ್ರಾಸವಾಗಿದೆ.
ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ನಡೆಸುವಾಗ 18ನೇ ಓವರ್ನಲ್ಲಿ ದೀಪಕ್ ಚಹಾರ್ ಬೌಲಿಂಗ್‍ನಲ್ಲಿ ಟಾಮ್ ಕರ್ರನ್ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ್ದರು. ಕ್ಯಾಚ್ ಪಡೆದ ಧೋನಿ ಅಂಪೈರ್ಗೆ ಔಟ್ ಎಂದು ಮನವಿ ಮಾಡಿದ್ದರು. ಮನವಿಯನ್ನು ಪುರಸ್ಕರಿಸಿದ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ ಅಂಪೈರ್ ತೀರ್ಮಾನದಿಂದ ಶಾಕ್ ಆದ ಕರ್ರನ್ ಮರುಪರಿಶೀಲನೆಗೆ ಮುಂದಾದ್ರು. ಇದರಿಂದ ನಿರಾಶರಾದ ಕರ್ರನ್ ಬೇಸರದಿಂದಲೇ ಹೊರ ನಡೆಯಲು ಮುಂದಾದ್ರು.
ಆದರೆ ತೀರ್ಪು ಮರುಪರಿಶೀಲನೆ ಮಾಡಲು ನಿರ್ಧರಿಸಿದ್ದ ಅಂಪೈರ್, ಮೂರನೇ ಅಂಪೈರ್ ಸಹಾಯ ಕೋರಿದ್ದರು. ರಿಪ್ಲೇನಲ್ಲಿ ಕ್ಯಾಚ್ ಪಡೆಯುವ ಮುನ್ನ ಚೆಂಡು ನೆಲಕ್ಕೆ ಬಡಿದಿರುವುದು ಸ್ಪಷ್ಟವಾಗಿತ್ತು. ಮತ್ತು ಚೆಂಡು ಬ್ಯಾಟ್ಗೆ ತಾಗಿರಲಿಲ್ಲ. ಇದರಿಂದ ತಮ್ಮ ತೀರ್ಪನ್ನು ಬದಲಿಸಿದ ಅಂಪೈರ್ ಕರ್ರನ್‍ರನ್ನು ನಾಟೌಟ್ ಎಂದು ಘೋಷಿಸಿದರು.
ನಿಯಮಗಳ ಪ್ರಕಾರ ಆನ್‍ಫೀಲ್ಡ್ ಅಂಪೈರ್ ತಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸುವ ಮುನ್ನವೇ ಮೂರನೇ ಅಂಪೈರ್ ನೆರವು ಪಡೆಯಬೇಕು. ತೀರ್ಪು ನೀಡಿದ ಬಳಿಕ ಅದನ್ನು ಬದಲಿಸಲು ಸಾಧ್ಯವಿಲ್ಲ ಎಂಬುದು ಚೆನ್ನೈ ಆಟಗಾರರ ವಾದವಾಗಿತ್ತು. ಹೀಗಾಗಿಯೇ ಸಿಎಸ್ಕೆ ನಾಯಕ ಎಂಎಸ್ ಧೋನಿ ಅಂಪೈರ್ ನಿರ್ಧಾರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಅಂಪೈರ್ ಜೊತೆ ಕೆಲ ಸಮಯ ವಾದವನ್ನು ನಡೆಸಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಅಂಪೈರ್ ನೀಡಿದ್ದ ಶಾರ್ಟ್ ರನ್ ನಿರ್ಧಾರ ಕೂಡ ಚರ್ಚೆಗೆ ಕಾರಣವಾಗಿತ್ತು.