ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ತಂಡದ ವ್ಯವಸ್ಥಾಪಕರ ವರದಿಯ ಮೂಲಕ ನಿತಿನ್ ಮೆನನ್ ಅವರ ಅಂಪೈರಿಂಗ್ ದೋಷವನ್ನು ಪಂದ್ಯದ ತೀರ್ಪುಗಾರರ ಗಮನಕ್ಕೆ ತರುವ ಹಕ್ಕನ್ನು ಹೊಂದಿದ್ದಾರೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿ ಅಧಿಕಾರಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿ ಅಧಿಕಾರಿಯೊಬ್ಬರು, ಈ ವಿಷಯವನ್ನು ವರದಿ ಮಾಡುವ ಹಕ್ಕನ್ನು ಪಂಜಾಬ್ ಫ್ರ್ಯಾಂಚೈಸಿ ಹೊಂದಿದೆ. ಅದನ್ನು ಮೌಲ್ಯಮಾಪನಕ್ಕೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಅಂತಹ ತಪ್ಪುಗಳು ಖಂಡಿತವಾಗಿಯೂ ಆಟಕ್ಕೆ ಉತ್ತಮವಲ್ಲ ಎಂದಿದ್ದಾರೆ.
19ನೇ ಓವರ್ನಲ್ಲಿ ಅಂಪೈರ್ ಮಾಡಿದ ಯಡವಟ್ಟು ಪಂಜಾಬ್ ಸೋಲಿಗೆ ಪ್ರಮುಖ ಕಾರಣ ಎನ್ನಲಾಗಿದೆ. 19ನೇ ಓವರ್ನಲ್ಲಿ ಜೋರ್ಡನ್ ಹಾಗೂ ಮಯಾಂಕ್ ಎರಡು ರನ್ ಓಡಿದರು. ಆದರೆ ಜೋರ್ಡನ್ ಕ್ರೀಸ್ ಮುಟ್ಟಿರಲಿಲ್ಲವೆಂದು ಅಂಪೈರ್ ನಿತಿನ್ ಮೆನನ್ ಶಾರ್ಟ್ ರನ್ ಎಂದು ತೀರ್ಪು ನೀಡಿದರು. ಅಂತಿಮವಾಗಿ ಪಂದ್ಯ ಟೈ ಆಗುವ ಮೂಲಕ ಸೂಪರ್ ಓವರ್ನಲ್ಲಿ ಡೆಲ್ಲಿ ತಂಡ ಗೆಲುವು ಸಾಧಿಸಿತು.
ಕಳೆದ ಕೆಲವು ವರ್ಷಗಳಲ್ಲಿ ಐಪಿಎಲ್ ಲೀಗ್ ಕಂಡ ತಪ್ಪುಗಳ ಸಂಖ್ಯೆಯ ಬಗ್ಗೆ ಕೇಳಿದಾಗ, ಅದನ್ನು ಕಡಿತಗೊಳಿಸಬೇಕಾಗಿದೆ ಮತ್ತು ತಂತ್ರಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಸಬೇಕು ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿ ಅಧಿಕಾರಿ ಹೇಳಿದ್ದಾರೆ.
ಅಂಪೈರ್ ಯಡವಟ್ಟಿನ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟರ್ ವಿರೇಂದ್ರ ಸೆಹ್ವಾಗ್, ಈ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಆಯ್ಕೆಯನ್ನು ನಾನು ಒಪ್ಪುವುದಿಲ್ಲ. ಮ್ಯಾನ್ ಆಫ್ ದಿ ಮ್ಯಾಚ್ ನೀಡಬೇಕಾದ್ದು ತಪ್ಪು ತೀರ್ಪು ನೀಡಿದ ಅಂಪೈರ್ಗೆ ಎಂದು ವ್ಯಂಗ್ಯವಾಡಿದ್ದಾರೆ.