ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ 9ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಇಂದು ಮುಖಾಮುಖಿಯಾಗುತ್ತಿವೆ.
ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವ ಪಂಜಾಬ್ ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದ್ರೆ, ಸ್ಟೀವ್ ಸ್ಮಿತ್ ಪಡೆ ಕೂಡ ತಮ್ಮ ಮೊದಲ ಪಂದ್ಯದಲ್ಲೇ ಸ್ಫೋಟಕ ಬ್ಯಾಟಿಂಗ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದಿತ್ತು. ಅದೇ ರೀತಿಯಲ್ಲಿ ಪಂಜಾಬ್ ತಂಡವನ್ನು ಮಣಿಸುವ ಲೆಕ್ಕಾಚಾರದಲ್ಲಿದೆ.
ಇದುವರೆಗೂ ಉಭಯ ತಂಡಗಳು 19 ಬಾರಿ ಮುಖಾಮುಖಿಯಾಗಿದ್ದು, 10 ಪಂದ್ಯಗಳಲ್ಲಿ ರಾಜಸ್ಥಾನ ಗೆಲುವು ಸಾಧಿಸಿದ್ರೆ, 9 ಪಂದ್ಯಗಳಲ್ಲಿ ಪಂಜಾಬ್ ಜಯದ ನಗೆ ಬೀರಿದೆ.
ರಾಜಸ್ಥಾನ ರಾಯಲ್ಸ್ ತಂಡ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿದ್ದು, ಸ್ಫೋಟಕ ಆಟಗಾರ ಜೋಸ್ ಬಟ್ಲರ್ ತಂಡ ಕೂಡಿಕೊಂಡರೆ ಸ್ಮಿತ್ ಪಡೆ ಬಲ ಹೆಚ್ಚಲಿದೆ. ಮೊದಲ ಪಂದ್ಯದಲ್ಲೆ ಅಬ್ಬರಿಸಿದ ಯುವ ಆಟಗಾರ ಸಂಜು ಸ್ಯಾಮ್ಸನ್ ಭರ್ಜರಿ ಫಾರ್ಮ್ನಲ್ಲಿದ್ದಾರೆ, ನಾಯಕ ಸ್ಟೀವ್ ಸ್ಮಿತ್, ರಾಬಿನ್ ಉತ್ತಪ್ಪ ರಾಜಸ್ಥಾನದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಜೋಫ್ರಾ ಆರ್ಚರ್, ಉನಾದ್ಕಟ್,ಆ್ಯಂಡ್ರ್ಯೂ ಟೈ, ಟಾಮ್ ಕರ್ರನ್ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.
ಇತ್ತ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೂಡ ಯಾವುದಕ್ಕೂ ಕಡಿಮೆ ಇಲ್ಲ. ನಾಯಕ ರಾಹುಲ್, ಮಯಾಂಕ್ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದರೆ, ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ, ಸ್ಪಿನ್ನರ್‌ಗಳಾದ ರವಿ ಬಿಷ್ನೋಯಿ, ಮುರುಗನ್ ಅಶ್ವಿನ್ ಕಳೆದ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಸಾಭೀತುಪಡಿಸಿದ್ದಾರೆ.
ಕಳೆದ ಎರಡು ಪಂದ್ಯಗಳಿಂದ ಹೊರಗುಳಿದಿರುವ ಕೆರಿಬಿಯನ್ ಆಟಗಾರ ಕ್ರಿಸ್ ಗೇಲ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರ ಎನ್ನುವುದನ್ನು ಕಾದು ನೋಡಬೇಕಿದೆ. ಉಭಯ ತಂಡಗಳಲ್ಲೂ ಹೊಡಿ ಬಡಿ ಆಟಗಾರರೇ ತುಂಬಿಕೊಂಡಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಸಿಗುವ ಸಾಧ್ಯತೆ ಇದೆ.