ದುಬೈ: ಸತತ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಗೆಲುವಿನ ಹಳಿಗೆ ಮರಳಲು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಇಂದು ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಸೆಣೆಸಾಟ ನಡೆಸಲಿವೆ.
ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ನರಿಗೆ ಸೋಲುಣಿಸಿದ್ದ ಧೋನಿ ಸಾರಥ್ಯದ ಚೆನ್ನೈ ತಂಡ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡಿದ್ದು, ಪಂಜಾಬ್ ಹುಡುಗರನ್ನು ಮಣಿಸಿ ಗೆಲುವಿನ ಟ್ರ್ಯಾಕ್ಗೆ ಮರಳುವ ಯೋಜನೆಯಲ್ಲಿದೆ.
ಐಪಿಎಲ್ ಇತಿಹಾಸದಲ್ಲೇ ಬಲಿಷ್ಠ ತಂಡವೆಂದು ಗುರುತಿಸಿಕೊಂಡಿದ್ದ ಸಿಎಸ್ಕೆ ತಂಡ ಕಳೆದ 2 ಪಂದ್ಯಗಳಿಂದ ನೀರಸ ಪ್ರದರ್ಶನ ತೋರುತ್ತಿದೆ. ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಆರಂಬಿಕ ಆಟಗಾರರು ವಿಫಲರಾಗುತ್ತಿದ್ದಾರೆ. ಬ್ಯಾಟಿಂಗ್ನಲ್ಲಿ ವಾಟ್ಸನ್ ಪದೇ ಪದೆ ವೈಫಲ್ಯ ಅನುಭವಿಸುತ್ತಿರುವುದು ತಂಡಕ್ಕೆ ತಲೆನೋವು ತರಿಸಿದೆ. ಗಾಯದ ನಂತರ ಕಂಬ್ಯಾಕ್ ಮಾಡಿರುವ ರಾಯುಡು ಕಳೆದ ಪಂದ್ಯದಲ್ಲಿ ಅಬ್ಬರಿಸಲಿಲ್ಲ.
ಡು ಪ್ಲೆಸಿಸ್ ಮತ್ತು ನಾಯಕ ಧೋನಿಯನ್ನು ಹೊರತುಪಡಿಸಿ ಯಾವೊಬ್ಬ ಆಟಗಾರರೂ ಹೇಳಿಕೊಳ್ಳುವಂತ ಉತ್ತಮ ಪ್ರದರ್ಶನ ತೋರುತ್ತಿಲ್ಲ. ಆದರೆ ಕಳೆದ ಪಂದ್ಯದಲ್ಲಿ 50 ರನ್ ಸಿಡಿದ್ದ ಜಡೇಜಾ ಮೇಲೆ ತಂಡ ಭರವಸೆ ಹೊಂದಿದೆ. ಇತ್ತ ಬೌಲಿಂಗ್ನಲ್ಲೂ ಸಿಎಸ್ಕೆ ಆಟಗಾರರು ಸುಧಾರಿಸಬೇಕಿದೆ. ಜಡೇಜಾ, ಪೀಯೂಷ್ ಚಾವ್ಲಾ, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್ ದುಬಾರಿಯಾಗುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ಬ್ರಾವೊ ಬೌಲಿಂಗ್ನಲ್ಲಿ ಕಮಾಲ್ ಮಾಡಲಿಲ್ಲ.
ಕನ್ನಡಿಗ ಕೆ.ಎಲ್. ರಾಹುಲ್ ತಂಡ, ಸಮರ್ಥ ಆಟಗಾರರನ್ನ ಹೊಂದಿದ್ದರೂ ಗೆಲುವು ಸಾಧಿಸಲು ಆಗುತ್ತಿಲ್ಲ. ಕಳೆದ ಪಂದ್ಯವನ್ನು ಹೊರತುಪಡಿಸಿದ್ರೆ ರಾಹುಲ್, ಮಾಯಾಂಕ್ ಅಗರ್ವಾಲ್ ಇಬ್ಬರು ಭರ್ಜರಿ ಪ್ದರ್ಶನ ತೋರಿದ್ರು. ಮ್ಯಾಕ್ಸ್ ವೆಲ್, ಕರುಣ್ ನಾಯರ್ ವೈಫಲ್ಯದಿಂದಾಗಿ ಮಧ್ಯಮ ಕ್ರಮಾಂಕ ಸುಧಾರಿಸಬೇಕಿದೆ. ಇತ್ತ ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ಇಲ್ಲಿಯವರೆಗೆ ಮೈದಾನಕ್ಕೆ ಇಳಿದಿಲ್ಲ ಇಂದಿನ ಪಂದ್ಯದಲ್ಲಾದ್ರು 11ರ ಬಳಗದಲ್ಲಿ ಕಾಣಿಸಿಕೊಳ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಪಂಜಾಬ್ ಬೌಲಿಂಗ್ ವಿಭಾಗದಲ್ಲಿ ಶೆಲ್ಡನ್ ಕಾಟ್ರೆಲ್ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ರು. ಆದ್ರೆ ಮೊಹಮ್ಮದ್ ಶಮಿ, ರವಿ ಬಿಷ್ನೋಯಿ, ನೀಶಮ್, ಕೆ.ಗೌತಮ್ ದುಬಾರಿಯಾಗುತ್ತಿದ್ದು, ಸುಧಾರಿಸಬೇಕಿದೆ.
ಉಭಯ ತಂಡಗಳು ಇಲ್ಲಿಯವರೆಗೆ 22 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 9 ಪಂದ್ಯಗಳಲ್ಲಿ ಪಂಜಾಬ್ ಗೆಲುವು ಸಾಧಿಸಿದ್ರೆ, 13 ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಸಿಎಸ್ಕೆ ಮೇಲುಗೈ ಸಾಧಿಸಿದೆ.