ಅಬುಧಾಬಿ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿ ಲೂಕಿ ಫರ್ಗ್ಯುಸನ್ರನ್ನ ಸಹ ಆಟಗಾರ ಪ್ಯಾಟ್ ಕಮ್ಮಿನ್ಸ್ ಶ್ಲಾಘಿಸಿದ್ದಾರೆ.
ಐಪಿಎಲ್‌ನ ಈ ಸೀಸನ್ನ ಮೊದಲ ಪಂದ್ಯ ಆಡಿದ ಫರ್ಗ್ಯುಸನ್ ನಾಲ್ಕು ಓವರ್ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿ ಕೇವಲ 15 ರನ್ ಮಾತ್ರ ಬಿಟ್ಟು ಕೊಟ್ಟರು. ಸೂಪರ್ ಓವರ್ನಲ್ಲೂ ಭರ್ಜರಿ ಪ್ರದರ್ಶನ ತೋರಿದ ಕಿವೀಸ್ ವೇಗಿ, ಮೊದಲ ಮೂರು ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸಿ ಕೆಕೆಆರ್ ಗೆಲುವಿಗೆ ಕಾರಣರಾದ್ರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ಆಸೀಸ್ ವೇಗಿ ಪ್ಯಾಟ್ ಕಮ್ಮಿನ್ಸ್, "ಸೂಪರ್ ಓವರ್ನಲ್ಲಿ ಬೌಲಿಂಗ್ ಮಾಡಲು ಫರ್ಗ್ಯುಸನ್ ಅವರನ್ನು ಆಯ್ಕೆ ಮಾಡುವುದು ಬಹಳ ಸುಲಭವಾದ ನಿರ್ಧಾರವಾಗಿತ್ತು. ಅವರು ಅಚ್ಚುಕಟ್ಟಾಗಿ ಬೌಲ್ ಮಾಡಿದರು. ಅವರ ಪ್ರದರ್ಶನದಿಂದ ನನಗೆ ಸಂತಸವಾಗಿದೆ. ಒತ್ತಡದ ಸಮಯದಲ್ಲೂ ಅಸಾಧಾರಣ ಪ್ರದರ್ಶನ ತೋರಿದರು" ಎಂದು ಸಹ ಆಟಗಾರನ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಕೆಕೆಆರ್ ಒಟ್ಟು 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ ನಾವಿನ್ನೂ ಅತ್ಯತ್ತಮ ಕ್ರಿಕೆಟ್ ಆಡಿಲ್ಲ ಸದ್ಯದಲ್ಲೇ ಅದು ಕೂಡ ಜರುಗಲಿದೆ ಎಂದಿದ್ದಾರೆ. "ನನಗೆ ಎಕ್ಸೈಟ್ ಆಗುವ ವಿಚಾರ ಏನೆಂದರೆ, ನಾವಿನ್ನೂ ಅತ್ಯುತ್ತಮ ಕ್ರಿಕೆಟ್ ಆಡಿಲ್ಲ. ಎದುರಾಳಿಯ ಮೇಲೆ ನಾವು ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿರುವಂತಹ ಒಂದು ಪಂದ್ಯವನ್ನೂ ಆಡಿಲ್ಲ. ಯಾವುದಾದರು ಹಂತದಲ್ಲಿ ಅಂತದ್ದೊಂದು ಆಟ ಸಂಭವಿಸಲಿದೆ. ನಾವು ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವುದು ಅದ್ಭುತವಾದ ವಿಚಾರ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.