ದುಬೈ: ಪ್ಲೇ-ಆಫ್ ಹಣಾಹಣಿಯಲ್ಲಿ ಇಂದು ಮುಂಬೈ ಮತ್ತು ಡೆಲ್ಲಿ ತಂಡಗಳು ಮುಖಾಮುಖಿಯಾಗುತ್ತಿದ್ದು, ರೋಹಿತ್ ಪಡೆಗೆ ಗೆಲುವು ಅಷ್ಟು ಸುಲಭವಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ ಹೇಳಿದ್ದಾರೆ.
ದೆಹಲಿ ಕ್ಯಾಪಿಟಲ್ಸ್ ಹೊಂದಿರುವ ಉತ್ತಮ ಸಂಯೋಜನೆಯ ಬಗ್ಗೆ ಮಾತನಾಡಿದ ಬಂಗಾರ್, ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು ಮುಂಬೈ ಇಂಡಿಯನ್ಸ್ಗೆ ಸವಾಲು ಹಾಕುವ ಏಕೈಕ ತಂಡವಾಗಿದೆ ಎಂದಿದ್ದಾರೆ.
ಪ್ಲೇ-ಆಫ್ಗೂ ಮೊದಲು ಯಾವ ತಂಡದ ಪ್ರದರ್ಶನ ಹೇಗಿತ್ತು ಎಂಬ ವಿಚಾರ ಈಗ ಗಣನೆಗೆ ಬರುವುದಿಲ್ಲ. ಪಂದ್ಯದ ದಿನ ಯಾವ ತಂಡ ಉತ್ತಮ ಪ್ರದರ್ಶನ ನೀಡುತ್ತೋ ಆ ತಂಡ ಗೆಲುವು ಸಾಧಿಸಲಿದೆ. ಡೆಲ್ಲಿ ಕ್ಯಾಪಿಟಲ್ಸ್ಗೆ ಹೆಚ್ಚು ಪ್ಲೇ-ಆಫ್ ಪಂದ್ಯಗಳನ್ನು ಆಡಿದ ಅನುಭವ ಇಲ್ಲದಿರಬಹುದು. ಆದರೆ, ಈ ಸೀಸನ್ನಲ್ಲಿ ಡೆಲ್ಲಿ ಯಾವ ರೀತಿಯ ಪ್ರದರ್ಶನ ನೀಡಿದೆ ಎಂಬುದು ನಿರ್ಣಾಯಕವಾಗುತ್ತದೆ ಎಂದಿದ್ದಾರೆ.
ಆರಂಭದಲ್ಲಿ ಯಶಸ್ಸು ಸಾಧಿಸಿದ ತಂಡ ನಂತರದಲ್ಲಿ ವೈಫಲ್ಯ ಅನುಭವಿಸಿತು. ಆದರೆ ಒಂದೊಳ್ಳೆ ಪಂದ್ಯದ ಮೂಲಕ ಪ್ಲೇ-ಆಫ್ನಲ್ಲಿ ದ್ವಿತೀಯ ಸ್ಥಾನ ಪಡೆಯಿತು. ಅವರು ಉತ್ತಮ, ಯುವ, ಅನುಭವಿ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದಾರೆ. ವಿದೇಶಿ ವೇಗಿಗಳು ಮತ್ತು ಭಾರತೀಯ ಸ್ಪಿನ್ನರ್‌ಗಳ ಸಂಗಮವಿದೆ. ಅನುಭವ, ವೇಗ, ಯುವಕರ ಮಿಶ್ರಣದಿಂದ ಕೂಡಿರುವ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ತಂಡವನ್ನು ಎದುರಿಸುವ ಸಾಮರ್ಥ್ಯ ಹೊಂದಿರುವ ಏಕೈಕ ತಂಡವಾಗಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ಗೆ ಸುಲಭವಾಗಿ ಜಯ ಸಿಗುವುದಿಲ್ಲ ಎಂದಿದ್ದಾರೆ.