ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ಗೆ ಪದಾರ್ಪಣೆ ಮಾಡಿದ ರಾಜಸ್ಥಾನ ರಾಯಲ್ಸ್ ವೇಗಿ ಕಾರ್ತಿಕ್ ತ್ಯಾಗಿ, ಪಂದ್ಯದಲ್ಲಿ ದೋಷಗಳನ್ನು ಕಡಿಮೆ ಮಾಡುವ ಸಲುವಾಗಿ ಹಿರಿಯ ಆಟಗಾರರಿಂದ ಕಲಿಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಮುಂಬೈ ವಿರುದ್ಧದ ಪಂದ್ಯದ ವೇಳೆ ಕ್ವಿಂಟನ್ ಡಿ ಕಾಕ್ ಮತ್ತು ರೋಹಿತ್ ಶರ್ಮಾ ಜೊತೆಯಾಟ ಮುರಿಯಲು ರಾಯಲ್ಸ್ ನಾಯಕ ಸ್ಟೀವ್ ಸ್ಮಿತ್ ತ್ಯಾಗಿಗೆ ಬುಲಾವ್ ನೀಡಿದ್ರು. ಓವರ್‌ನ ಅಂತಿಮ ಎಸೆತದಲ್ಲಿ ಡಿ ಕಾಕ್ (23) ವಿಕೆಟ್ ಪಡೆಯುವ ಮೂಲಕ ತ್ಯಾಗಿ ಯಶಸ್ಸು ಸಾಧಿಸಿದ್ರು.

'ನನ್ನ ಮೊದಲ ಪಂದ್ಯ ಒಂದು ಉತ್ತಮ ಅನುಭವ. ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಿಂದ ಕ್ಯಾಪ್ ಪಡೆಯುವುದು ಅದೃಷ್ಟ. ನಾನು ದೂರದರ್ಶನದಲ್ಲಿ ಮಾತ್ರ ವೀಕ್ಷಿಸಿದ ಆಟಗಾರರ ವಿರುದ್ಧ ಚೊಚ್ಚಲ ಪಂದ್ಯ ಆಡುತ್ತಿರುವುದು ಅದ್ಭುತವಾಗಿದೆ' ಎಂದು ರಾಜಸ್ಥಾನ ರಾಯಲ್ಸ್ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯಲ್ಲಿ ತ್ಯಾಗಿ ಹೇಳಿದ್ದಾರೆ.
'ನಾನು ಇಲ್ಲಿಯವರೆಗೆ ಭೇಟಿಯಾದ ಎಲ್ಲಾ ಹಿರಿಯ ಆಟಗಾರರು ಪಂದ್ಯಗಳಿಗೆ ಹೇಗೆ ತಯಾರಿ ನಡೆಸುತ್ತಾರೆಂದು ತಿಳಿಯಲು ಪ್ರಯತ್ನಿಸುತ್ತಿದ್ದೇನೆ. ಅವರು ಏನು ಯೋಚಿಸುತ್ತಿದ್ದಾರೆ ಮತ್ತು ಅವರ ತಲೆಯಲ್ಲಿ ಏನೆಲ್ಲಾ ಯೋಜನೆ ಬರುತ್ತವೆ. ನಾನು ಹೇಗೆ ಕಡಿಮೆ ತಪ್ಪುಗಳನ್ನು ಮಾಡಬಹುದು ಮತ್ತು ದೋಷಗಳನ್ನು ಕಡಿಮೆ ಮಾಡಲು ಅವರು ಹೇಗೆ ಪ್ರಯತ್ನಿಸುತ್ತಾರೆ ಎಂದು ತಿಳಿಯುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
ಮುಂಬೈ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್ ಬೌಲಿಂಗ್ ಮಾಡಿದ್ದ ತ್ಯಾಗಿ, 36 ರನ್ ಬಿಟ್ಟುಕೊಟ್ಟು 1 ವಿಕೆಟ್ ಕಬಳಿಸಿದ್ರು.