ದುಬೈ: ಗುರುವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ 4 ವಿಕೆಟ್ ಪಡೆಯುವ ಮೂಲಕ ಕಾಗಿಸೊ ರಬಾಡಾ ಅವರಿಂದ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ.
ಡೆಲ್ಲಿ ತಂಡದ ವಿರುದ್ಧ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಬುಮ್ರಾ, 4 ಓವರ್ನಲ್ಲಿ ಕೇವಲ 14 ರನ್ ಬಿಟ್ಟುಕೊಟ್ಟು ಪ್ರಮುಖ 4 ವಿಕೆಟ್ ಪಡೆದು ಮಿಂಚಿದ್ರು. ಈ ಸೀಸನ್ನಲ್ಲಿ 14 ಪಂದ್ಯಗಳನ್ನು ಆಡಿರುವ ಬುಮ್ರಾ 27 ವಿಕೆಟ್ ಪಡೆದಿದ್ದಾರೆ. 15 ಪಂದ್ಯಗಳಿಂದ 25 ವಿಕೆಟ್ ಪಡೆದ ರಬಾಡಾ ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 22 ವಿಕೆಟ್ ಪಡೆದಿರುವ ಟ್ರೆಂಟ್ ಬೌಲ್ಟ್ ಮೂರನೇ ಸ್ಥಾನದಲ್ಲಿದ್ದಾರೆ.
ಹೆಚ್ಚು ರನ್ ಗಳಿಸಿರುವವರ ಪಟ್ಟಿಯಲ್ಲಿ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಮೊದಲ ಸ್ಥಾನದಲ್ಲಿದ್ದು, ಆರೆಂಜ್ ಕ್ಯಾಪ್ ಅನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ರಾಹುಲ್ 14 ಪಂದ್ಯಗಳಿಂದ 670 ರನ್ ಗಳಿಸಿದ್ದಾರೆ. ಕಿಂಗ್ಸ್ ಇಲೆವೆನ್ ಪ್ಲೇ - ಆಫ್‌ಗೆ ಅರ್ಹತೆ ಪಡೆಯಲು ವಿಫಲವಾದ ಕಾರಣ ರಾಹುಲ್ ಹೆಚ್ಚಿನ ರನ್ ಗಳಿಸಲು ಸಾಧ್ಯವಿಲ್ಲ. ಸನ್‌ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ 14 ಪಂದ್ಯಗಳಿಂದ 529 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ರೆ, ಶಿಖರ್ ಧವನ್ 15 ಪಂದ್ಯಗಳಿಂದ 525 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಇಂದು ಸಂಜೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಎಲಿಮಿನೇಟರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಲಿದೆ. ಇಂದಿನ ಪಂದ್ಯ ಜಯಿಸಿದ ತಂಡ ಭಾನುವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.