ಮೊಹಾಲಿ: ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಸಂಘಟಿತ ಹೋರಾಟ ನಡೆಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 12 ರನ್ಗಳ ಜಯ ಸಾಧಿಸಿದೆ.
ಪಂಜಾಬ್ ನೀಡಿದ 183 ರನ್ಗಳ ಗುರಿ ಬೆನ್ನತ್ತಿದ ರಾಜಸ್ಥಾನ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 170 ರನ್ಗಳಿಸಲಷ್ಟೆ ಶಕ್ತವಾಗಿ 12 ರನ್ಗಳ ಅಂತರದ ಸೋಲನುಭವಿಸಿತು.
ರಾಜಸ್ಥಾನ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಬಟ್ಲರ್ (23) ಹಾಗೂ ತ್ರಿಪಾಠಿ (50) ಮೊದಲ ವಿಕೆಟ್ಗೆ 38 ರನ್ಗಳ ಕಲೆಹಾಕಿದರು. ಬಟ್ಲರ್ ಪಾದಾರ್ಪಣೆ ಮಾಡಿದ ಅರ್ಶ್ದೀಪ್ ಬೌಲಿಂಗ್ನಲ್ಲಿ ಮಯಾಂಕ್ಗೆ ಕ್ಯಾಚ್ ನೀಡಿ ಔಟಾದರು. ನಂತರ ತ್ರಿಪಾಠಿ ಜೊತೆಗೂಡಿ ಸಾಮ್ಸನ್ (27) 2 ನೇ ವಿಕೆಟ್ಗೆ 59 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು.
ಆದರೆ ಪಂಜಾಬ್ ಸ್ಪಿನ್ನರ್ಗಳು ಬೌಂಡರಿಗಳನ್ನು ಬಿಟ್ಟುಕೊಡದೆ ರಾಜಸ್ಥಾನ ಬ್ಯಾಟ್ಸ್ಮನ್ಗಳ ಅಬ್ಬರಕ್ಕೆ ಕಡಿವಾಣ ಹಾಕಿದರು. 27 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಸಾಮ್ಸನ್ರನ್ನು ನಾಯಕ ಅಶ್ವಿನ್ ಬೌಲ್ಡ್ ಮಾಡಿದರು. ನಂತರ ಇದೇ ಪಂದ್ಯದ ಮೂಲಕ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಆಸೀಸ್ನ ಆಶ್ಟನ್ ಟರ್ನರ್ ಗೋಲ್ಡನ್ ಡಕ್ಗೆ ಔಟ್ ಆದರು.
ಬಳಿಕ ರಹಾನೆ (26) ಹಾಗೂ ಸ್ಟುವರ್ಟ್ ಬಿನ್ನಿ 11 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಿತ 33 ರನ್ಗಳಿಸಿ ಗೆಲುವಿಗಾಗಿ ತೀವ್ರ ಹೋರಾಟ ನಡೆಸಿದರಾದರೂ 20 ಓವರ್ಗಳಲ್ಲಿ 170 ರನ್ಗಳಿಸಲಷ್ಟೇ ಶಕ್ತರಾದರು.
ಪಂಜಾಬ್ ಪರ ಅರ್ಶದೀಪ್ ಸಿಂಗ್ 2, ಮೊಹಮದ್ ಶಮಿ 2, ಆರ್.ಅಶ್ವಿನ್ 2 ಹಾಗೂ ಮುಜೀಬ್ ಒಂದು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಗೆಲುವಿನೊಂದಿಗೆ ಪಂಜಾಬ್ 10 ಅಂಕ ಸಂಪಾದಿಸಿಕೊಂಡು ಕೆಕೆಆರ್ ಹಿಂದಿಕ್ಕಿ 4ನೇ ಸ್ಥಾನ ಪಡೆದುಕೊಂಡಿತು. ರಾಜಸ್ಥಾನ್ ರಾಯಲ್ಸ್ 7ನೇ ಸ್ಥಾನದಲ್ಲೇ ಮುಂದುವರೆದಿದೆ.