ನವದೆಹಲಿ: ಭಾರತದಲ್ಲಿ ನಡೆಯುವ ಏಕದಿನ ಕ್ರಿಕೆಟ್ ವಿಶ್ವಕಪ್ಗೆ 60 ದಿನಗಳು ಬಾಕಿ ಉಳಿದಿವೆ. ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾಕಪ್‌ಗೆ ಒಂದು ತಿಂಗಳಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮಾಡಿದ ಪ್ರಯೋಗದ ಹೊರತಾಗಿಯೂ ಟೀಂ ಇಂಡಿಯಾದ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಆಟಗಾರ ಯಾರೆಂದು ಗೊತ್ತಾಗಿಲ್ಲ. ಎರಡು ಮಹತ್ವದ ಸಿರೀಸ್‌ನ ನಡುವೆ ಈ ಸ್ಥಾನದಲ್ಲಿ ಯಾರು ಕ್ರೀಸಿಗಿಳಿಯುತ್ತಾರೆ ಎಂಬುದು ಸದ್ಯದ ಪ್ರಶ್ನೆ.
ಕಳೆದ ಡಿಸೆಂಬರ್ 30ರಂದು ಕಾರು ಅಪಘಾತದಿಂದ ಗಂಭೀರ ಗಾಯಕ್ಕೊಳಗಾಗಿದ್ದ ರಿಷಬ್ ಪಂತ್ ಇದೀಗ ಚೇತರಿಕೆ ಹಾದಿಯಲ್ಲಿದ್ದಾರೆ. ಪಂತ್ ನೆಟ್ಸ್ನಲ್ಲಿ ಬ್ಯಾಟಿಂಗ್, ಕೀಪಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಆದರೆ ವಿಶ್ವಕಪ್ ವೇಳೆಗೆ ತಂಡ ಸೇರಿಕೊಳ್ಳುವುದು ಅನುಮಾನ. ಸಂಪೂರ್ಣವಾಗಿ ಚೇತರಿಸಿಕೊಳ್ಳದೇ ಇವರನ್ನು ಬಿಸಿಸಿಐ ಮೈದಾನಕ್ಕಿಳಿಸುವ ಸಾಧ್ಯತೆ ಕಡಿಮೆ. ಬುಮ್ರಾರಂತೆ ಸಂಪೂರ್ಣ ಚೇತರಿಕೆಗೆ ಸಮಯಕೊಡುವ ನಿರೀಕ್ಷೆ ಇದೆ. ಹೀಗಾಗಿ ಮುಂದಿನ ವರ್ಷವೇ ಪಂತ್ ಅವರನ್ನು ಮೈದಾನದಲ್ಲಿ ನೋಡಬಹುದು.
ಇತ್ತೀಚೆಗೆ ಕೆ.ಎಲ್.ರಾಹುಲ್ ಸಹ ಫಿಟ್ ಆಗಿ ಬ್ಯಾಟಿಂಗ್ ಮತ್ತು ಕೀಪಿಂಗ್ ಮಾಡುವ ವಿಡಿಯೋ ಹಂಚಿಕೊಂಡಿದ್ದರು. ಮುಂದಿನ ಸರಣಿಯಲ್ಲಿ ಇವರು ಓರ್ವ ಆಟಗಾರರಾಗಿ ತಂಡ ಸೇರ್ಪಡೆಯಾಗಲಿದ್ದಾರೆ. ಹೀಗಾಗಿ ನಾಲ್ಕನೇ ಸ್ಥಾನಕ್ಕೆ ಹೆಚ್ಚಿನ ಆಟಗಾರರಲ್ಲಿ ಸ್ಪರ್ಧೆ ಇದ್ದು, ಮಹತ್ವದ ಕಪ್ಗಳಲ್ಲಿ ಯಾರು ಸ್ಥಾನ ಪಡೆಯುವರು ಎಂಬುದನ್ನು ಕಾದುನೋಡಬೇಕು.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಚೇತರಿಸಿಕೊಂಡ ಬುಮ್ರಾ ಮುಂದಿನ ಐರ್ಲೆಂಡ್ ಸರಣಿಯ ನಾಯಕರಾಗಿ ಕಮ್ಬ್ಯಾಕ್ ಮಾಡಿದ್ದಾರೆ. ಆದರೆ ಐಪಿಎಲ್ಗೂ ಮುನ್ನ ಗಾಯಕ್ಕೆ ತುತ್ತಾದ ಶ್ರೇಯಸ್ ಅಯ್ಯರ್ ಅವರ ಫಿಟ್ನೆಸ್ ಬಗ್ಗೆ ಇನ್ನೂ ಯಾವುದೇ ಮಾಹಿತಿಯಿಲ್ಲ. ರಾಹುಲ್ ಮತ್ತು ಅಯ್ಯರ್ ಅವರ ಫಿಟ್ನೆಸ್ ಡ್ರಿಲ್ ಮಾಡುವ ಕುರಿತು ಬಿಸಿಸಿಐ ಇತ್ತೀಚೆಗೆ ತಿಳಿಸಿತ್ತು. ಐರ್ಲೆಂಡ್ ಸರಣಿಯಲ್ಲಿ ರಾಹುಲ್, ಅಯ್ಯರ್ ಅವರ ಕಮ್ಬ್ಯಾಕ್ ನಿರೀಕ್ಷಿಸಲಾಗಿತ್ತು. ಆದರೆ ಇಬ್ಬರು ಆಟಗಾರರು ನೇರವಾಗಿ ಏಷ್ಯಾ ಕಪ್ನಲ್ಲೇ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಇಲ್ಲವಾದಲ್ಲಿ ವಿಶ್ವಕಪ್ಗೂ ಮುನ್ನ ನಡೆಯುವ ಆಸ್ಟ್ರೇಲಿಯಾದ ವಿರುದ್ಧದ ಸರಣಿಗೆ ಆಯ್ಕೆಯಾಗಬೇಕಿದೆ.
ಭಾರತ ತಂಡದಲ್ಲಿ ಆರಂಭಿಕ ಸ್ಥಾನ ಮತ್ತು ನಾಲ್ಕನೇ ಸ್ಥಾನಕ್ಕೆ ಪೈಪೋಟಿ ಹೆಚ್ಚಿದೆ. ಅತ್ತ ಸಂಜು ಸ್ಯಾಮ್ಸನ್ ವಿಂಡೀಸ್ ವಿರುದ್ಧದ ಕೊನೆಯ ಏಕದಿನದಲ್ಲಿ ಅರ್ಧಶತಕ ಗಳಿಸಿ ಭರವಸೆ ಮೂಡಿಸಿದ್ದಾರೆ. ಈ ಪ್ರವಾಸದಲ್ಲಿ ಮೂರು ಏಕದಿನ ಪಂದ್ಯಗಳನ್ನಾಡಿರುವ ಸೂರ್ಯ ಕೂಡಾ ಮಧ್ಯಮ ಕ್ರಮಾಂಕಕ್ಕೆ ಸ್ಪರ್ಧಿ. ಹೀಗಾಗಿ ಯಾರು ಸ್ಥಾನ ಪಡೆಯುತ್ತಾರೆ ಎಂಬುದು ನಿರೀಕ್ಷೆ. ವಿಕೆಟ್ ಕೀಪರ್ ಕಮ್ ಬ್ಯಾಟರ್ ಇಶಾನ್ ಕಿಶನ್ ಉತ್ತಮ ಫಾರ್ಮ್ನಲ್ಲಿದ್ದು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸಾಮರ್ಥ್ಯ ಪ್ರದರ್ಶಿಸಬೇಕಿದೆ.
ಇದನ್ನೂ ಓದಿ: IND vs WI 2nd T20: ಮೊದಲ ಪಂದ್ಯದ ಸೋಲಿನ ಸೇಡು ತೀರಿಸಲು ಹಾರ್ದಿಕ್ ಪಡೆ ರೆಡಿ.. ಅಬ್ಬರಿಸಬೇಕಿದೆ ಐಪಿಎಲ್ ಸ್ಟಾರ್ಸ್