ಮುಂಬೈ: ಬೆನ್ನುಮೂಳೆ ಸಮಸ್ಯೆಯಿಂದಾಗಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಐಸಿಸಿ ಪುರುಷರ ಟಿ20 ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ದೃಢಪಡಿಸಿದೆ. ಈಗಾಗಲೇ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರವೀಂದ್ರ ಜಡೇಜಾ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಜಸ್ಪ್ರೀತ್ ಬುಮ್ರಾ ಸಹ ಗಾಯಗೊಂಡು ಹೊರಗುಳಿಯುವಂತಾಗಿದೆ. ಈ ಮೂಲಕ T20 ವಿಶ್ವಕಪ್‌ನಿಂದ ಹೊರಗುಳಿದ ಭಾರತದ ಎರಡನೇ ಹಿರಿಯ ಆಟಗಾರ ಬುಮ್ರಾ ಆಗಿದ್ದಾರೆ.
28ರ ಹರೆಯದ ಬುಮ್ರಾ ಕಳೆದ ತಿಂಗಳ ಆರಂಭದಲ್ಲಿ ಬೆನ್ನುನೋವಿಗೆ ತುತ್ತಾಗಿದ್ದರಿಂದ ಏಷ್ಯಾಕಪ್‌ನಿಂದ ಹೊರಗುಳಿದಿದ್ದರು. ಅವರು ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ T20I ಸರಣಿಗೆ ಮರಳಿದ್ದರು. ಭಾರತವು ಈ ಸರಣಿಯನ್ನು 2-1 ರಿಂದ ಗೆದ್ದಿತು. ಎರಡು ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದ ಬುಮ್ರಾ ಒಂದು ವಿಕೆಟ್ ಪಡೆದಿದ್ರು.
ಐಸಿಸಿ ಪುರುಷರ ಟಿ 20 ವಿಶ್ವಕಪ್ ತಂಡದಿಂದ ಟೀಮ್ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಕೈ ಬಿಡುವ ಮೊದಲು ಬಿಸಿಸಿಐ ವ್ಯದ್ಯಕೀಯ ತಂಡದಿಂದ ಸಂಪೂರ್ಣವಾದ ವರದಿ ತರಿಸಿಕೊಂಡ ಬಳಿಕವೇ ಈ ನಿರ್ಧಾರ ಕೈಗೊಂಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ವೈಟ್-ಬಾಲ್ ಸರಣಿಗಾಗಿ ಬುಮ್ರಾ ಅವರನ್ನು ಭಾರತದ ತಂಡದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಆದರೆ ಬೆನ್ನುನೋವಿನ ಹಿನ್ನೆಲೆಯಲ್ಲಿ ತಿರುವನಂತಪುರಂನಲ್ಲಿ ನಡೆದ ಮೊದಲ T20I ಪಂದ್ಯದಲ್ಲಿ ಆಡಿರಲಿಲ್ಲ.
ಇದನ್ನು ಓದಿ:ಹೆಚ್ಚಿನ ಸ್ಟ್ರೈಕ್ ರೇಟ್ ಇನ್ನಿಂಗ್ಸ್ನ ಅವಶ್ಯಕತೆ ಇತ್ತು : ಕೆಎಲ್ ರಾಹುಲ್