ಹೈದರಾಬಾದ್: 2023ರ ವಿಶ್ವಕಪ್ ಫೈನಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿ ಆಗುತ್ತಿವೆ. ಇದನ್ನೂ ಸೇರಿಸಿ ಭಾರತ 4 ಭಾರಿ ಫೈನಲ್ ಹಂತ ತಲುಪಿದೆ. ಕಳೆದ ಮೂರರಲ್ಲಿ ಭಾರತ ಒಂದರಲ್ಲಿ ಸೋತು ಎರಡು ಬಾರಿ ಚಾಂಪಿಯನ್ ಆಗಿದೆ. 6 ಬಾರಿ ಫೈನಲ್ ಪ್ರವೇಶಿಸಿದ ಆಸೀಸ್ 1975ರಲ್ಲಿ ರನ್ನರ್ ಅಪ್ ಆಗಿದ್ದು, ಮತ್ತೆ ಐದು ಬಾರಿ ವಿಶ್ವಕಪ್ ಗೆದ್ದಿದೆ. ಈಗ 7ನೇ ಬಾರಿಗೆ ಫೈನಲ್‌ಗೆ ತಲುಪಿರುವ ಕಾಂಗರೂ ಪಡೆಗೆ ಫಲಿತಾಂಶ ಸಿಹಿಯೋ ಕಹಿಯೋ ನಾಳೆ ತಿಳಿಯಲಿದೆ.
2003ರ ವಿಶ್ವಕಪ್ ಫೈನಲ್ಲ್ಲಿ ಭಾರತ ಮತ್ತು ಆಸ್ಟ್ರೇಲಿಯಾವೇ ಮುಖಾಮುಖಿ ಆಗಿತ್ತು. ಅದರೆ, ಅಂದು ಭಾರತವನ್ನು ಆಸೀಸ್ ಪಡೆ 125 ರನ್ಗಳಿಂದ ಮಣಿಸಿ ಚಾಂಪಿಯನ್ ಆಗಿತ್ತು. ಭಾರತಕ್ಕೆ ಈ ಸೇಡು ತೀರಿಸಿಕೊಳ್ಳಲು ಅವಕಾಶ ತೆರೆದುಕೊಂಡಿದೆ. 2023ರ ವಿಶ್ವಕಪ್ನಲ್ಲಿ ಯಾರಿಂದಲೂ ನಿಯಂತ್ರಿಸಲಾಗದ ತಂಡವಾಗಿ 10 ಜಯ ಸಾಧಿಸಿರುವ ಭಾರತ ಕೊನೆಯ ಹಣಾಹಣಿಯಲ್ಲಿ ಹೇಗೆ ಪ್ರದರ್ಶನ ನೀಡುತ್ತದೆ ಎಂದು ಎಲ್ಲರೂ ಕುತೂಹಲದಿಂದ ಕಾದುಕುಳಿತಿದ್ದಾರೆ.
ಫೈನಲ್ನಲ್ಲಿ ಭಾರತ ಪ್ರದರ್ಶನ:
1983 ಕ್ರಿಕೆಟ್ ವಿಶ್ವಕಪ್ ಫೈನಲ್ ವೆಸ್ಟ್ ಇಂಡೀಸ್ ವಿರುದ್ಧ ಲಾರ್ಡ್ಸ್: 1975 ಮತ್ತು 1979 ರಲ್ಲಿ ಎರಡು ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಭಾರತ ಇಂಗ್ಲೆಂಡ್‌ನಲ್ಲಿ ನಡೆದ 1983ರ ಆವೃತ್ತಿಯ ಪಂದ್ಯಾವಳಿಯ ಫೈನಲ್‌ಗೆ ಭಾರತ ತಲುಪಿ ಮೊದಲೆರಡು ವಿಶ್ವಕಪ್ನ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್ ತಂಡವನ್ನೇ ಮಣಿಸಿತು. ದಿಗ್ಗಜ ಆಟಗಾರರನ್ನು ಹೊಂದಿದ್ದ ವೆಸ್ಟ್ ಇಂಡೀಸ್ಗೆ ಇದು ಅನಿರೀಕ್ಷಿತ ಆಘಾತವಾಗಿತ್ತು.
2003 ಕ್ರಿಕೆಟ್ ವಿಶ್ವಕಪ್ ಫೈನಲ್, ಆಸ್ಟ್ರೇಲಿಯಾ ವಿರುದ್ಧ ಜೋಹಾನ್ಸ್‌ಬರ್ಗ್: 1983ರ ವಿಶ್ವಕಪ್ ಗೆಲುವಿನ ನಂತರ ಭಾರತಕ್ಕೆ ಮತ್ತೆ ಅಂತಿಮ ಹಂತಕ್ಕೆ ತಲುಪಲು ಸಾಧ್ಯವಾಗಿರಲಿಲ್ಲ. 20 ವರ್ಷದ ನಂತರ ಮತ್ತೆ ಫೈನಲ್ ಸ್ಥಾನಕ್ಕೆ ಪ್ರವೇಶ ಪಡೆದಿತ್ತು. ರಿಕಿ ಪಾಂಟಿಂಗ್ (140), ಆಡಮ್ ಗಿಲ್‌ಕ್ರಿಸ್ಟ್ (57) ಮತ್ತು ಮ್ಯಾಥ್ಯೂ ಹೇಡನ್ (37) ಅವರ ಆಟದ ನೆರವಿನಿಂದ ಆಸ್ಟ್ರೇಲಿಯಾ ಅಂದು 359 ರನ್ಗಳಿಸಿತ್ತು. ಇದನ್ನು ಬೆನ್ನಟ್ಟಿದ್ದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ (82), ಸೌರವ್ ಗಂಗೂಲಿ (47), ದ್ರಾವಿಡ್ ಒಳಗೊಂಡಿದ್ದ ತಂಡ 125 ರನ್ಗಳ ಸೋಲನುಭವಿಸಿತ್ತು.
2011 ಕ್ರಿಕೆಟ್ ವಿಶ್ವಕಪ್ ಫೈನಲ್ ಶ್ರೀಲಂಕಾ ವಿರುದ್ಧ, ಮುಂಬೈ: 2003ರಲ್ಲಿ ಸೋತ ನಂತರ 2011ರಲ್ಲಿ ಮತ್ತೆ ಫೈನಲ್‌ಗೆ ಭಾರತ ಪ್ರವೇಶಿಸಿತ್ತು. 28 ವರ್ಷದ ನಂತರ ಏಕದಿನ ವಿಶ್ವಕಪ್ ಗೆಲ್ಲುವ ಅವಕಾಶ ಭಾರತದ ಮುಂದಿತ್ತು. ಭಾರತದಲ್ಲೇ ಈ ವಿಶ್ವಕಪ್ ನಡೆಯುತ್ತಿದ್ದರಿಂದ ಗೆಲ್ಲುವ ವಿಶ್ವಾಸ ಎಲ್ಲರಲ್ಲಿತ್ತು. ಆದರೆ ಎದುರಾಳಿ ಶ್ರೀಲಂಕಾ ಆದ್ದರಿಂದ ಇಲ್ಲಿನ ಪಿಚ್ ಮತ್ತು ಕಂಡೀಷನ್ ಅವರಿಗೆ ಹೊಸದಾಗಿರಲಿಲ್ಲ. ಹೀಗಾಗಿ ಕಠಿಣ ಫೈಪೋಟಿಯೇ ನಡೆಯಿತು. ಮಹೇಲಾ ಜಯವರ್ಧನೆ ಶತಕದ ನೆರವಿನಿಂದ ಲಂಕಾ 50 ಓವರ್‌ಗಳಲ್ಲಿ 274/6 ಕಲೆ ಹಾಕಿತು. ಇದನ್ನು ಬೆನ್ನಟ್ಟಿದ್ದ ಭಾರತ ಸೆಹ್ವಾಗ್, ಸಚಿನ್ ಅವರನ್ನು ಬೇಗ ಕಳೆದುಕೊಂಡಿತ್ತು. ಮಧ್ಯಮ ಕ್ರಮಾಂಕದಲ್ಲಿ ಗಂಭೀರ್ ಮತ್ತು ವಿರಾಟ್ ಜೊತೆಯಾಟ ಹಾಗೇ ಕೊನೆಯಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಆಟದ ನೆರವಿನಿಂದ 6 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿ 28 ವರ್ಷದ ನಂತರ ಪ್ರಶಸ್ತಿಗೆ ಮುತ್ತಿಕ್ಕಿತು.
2023 ಕ್ರಿಕೆಟ್ ವಿಶ್ವಕಪ್ ಫೈನಲ್ ಆಸ್ಟ್ರೇಲಿಯಾ ವಿರುದ್ಧ, ಅಹಮದಾಬಾದ್: 12 ವರ್ಷದ ನಂತರ ಮತ್ತೆ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಿದೆ. 2011ರಂತೆ ಈ ಬಾರಿಯೂ ವಿಶ್ವಕಪ್ ಭಾರತದಲ್ಲೇ ನಡೆಯುತ್ತಿರುವುದು ಮತ್ತು ಟೀಮ್ ಇಂಡಿಯಾದ ಸ್ಥಿರ ಪ್ರದರ್ಶನದಿಂದ ಗೆಲ್ಲುವ ಫೇವ್ರಿಟ್ ಆಗಿದೆ. ಸ್ಥಿರತೆ ಇಲ್ಲದ ಕಾಂಗರೂಪಡೆಯನ್ನು ಬಗ್ಗು ಬಡಿದು, 2003ರ ಹಗೆ ತೀರಿಸಿಕೊಂಡು ಕೋಚ್ ದ್ರಾವಿಡ್ಗೆ ಕಪ್ ಸಮರ್ಪಿಸಲು ತಂಡ ಸಜ್ಜಾಗಿದೆ.
ಇದನ್ನೂ ಓದಿ: ಅಜೇಯವಾಗಿ ವಿಶ್ವಕಪ್ ಗೆಲ್ಲುತ್ತಾ ಭಾರತ: ರೋಹಿತ್ ಪಡೆಯೇ ಗೆಲ್ಲುವ ಫೇವ್ರಿಟ್ ಏಕೆ?