ಮುಂಬೈ : ಭಾರತ ಮಹಿಳಾ ತಂಡ ಕಳೆದ ವರ್ಷದ ಟಿ20 ವಿಶ್ವಕಪ್ ರನ್ನರ್ ಅಪ್ ಬಹುಮಾನ ಮೊತ್ತವನ್ನು ತನ್ನಲ್ಲೇ ಉಳಿಸಿಕೊಂಡಿದ್ದ ಬಿಸಿಸಿಐ, ಮಾಧ್ಯಮಗಳ ವರದಿಗೆ ಎಚ್ಚೆತ್ತುಕೊಂಡಿದೆ. ಈ ವಾರವೇ ವಿಶ್ವಕಪ್ ತಂಡದ ಸದಸ್ಯರಿಗೆ ಸಿಗಬೇಕಿರುವ ಹಣವನ್ನು ತಲುಪಿಸುವುದಾಗಿ ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ಕಳೆವ ವರ್ಷ ಹರ್ಮನ್ ಪ್ರೀತ್ಕೌರ್ ನೇತೃತ್ವದ ಭಾರತದ ವನಿತೆಯರ ತಂಡ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ರನ್ನರ್ ಅಪ್ ಆಗಿತ್ತು.
ಐಸಿಸಿ ಚಾಂಪಿಯನ್ ತಂಡಕ್ಕೆ 10 ಲಕ್ಷ ಯುಎಸ್ ಡಾಲರ್ ಮತ್ತು ರನ್ನರ್ ಅಪ್ಗೆ 5 ಲಕ್ಷ ಯುಎಸ್ ಡಾಲರ್ ಬಹುಮಾನದ ಮೊತ್ತ ನೀಡಿತ್ತು. ಆದರೆ, ವಿಶ್ವಕಪ್ ಮುಗಿದು 14 ತಿಂಗಳಾದರೂ ಬಿಸಿಸಿಐ ಮಹಿಳಾ ತಂಡಕ್ಕೆ ನೀಡಬೇಕಾದ ಬಹುಮಾನ ಮೊತ್ತವನ್ನು ತನ್ನಲ್ಲೇ ಉಳಿಸಿಕೊಂಡಿತ್ತು.
ಭಾನುವಾರ ಇಂಗ್ಲೆಂಡ್ನ ಟೆಲಿಗ್ರಾಫ್ ಪತ್ರಿಕೆ ಈ ಕುರಿತು ವರದಿ ಪ್ರಕಟಿಸಿ, ಬಿಸಿಸಿಐಗೆ ಕಾರಣ ಕೇಳಿತ್ತು. ಈ ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡಂತಿದೆ ಬಿಸಿಸಿಐ.
ಈ ವಾರವೇ ಬಹುಮಾನದ ಮೊತ್ತವನ್ನು ವಿಶ್ವಕಪ್ನಲ್ಲಿ ಭಾಗವಹಿಸಿದ್ದ ತಂಡಕ್ಕೆ ನೀಡುವುದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸದಸ್ಯರು ಈ ವಾರದ ಅಂತ್ಯದ ವೇಳೆಗೆ ತಮ್ಮ ಬಹುಮಾನದ ಮೊತ್ತವನ್ನು ಪಡೆಯಲಿದ್ದಾರೆ. ವರ್ಗಾವಣೆ ಪ್ರಕ್ರಿಯೆಗೊಳಿಸಲಾಗಿದ್ದು, ಅವರು ಶೀಘ್ರದಲ್ಲೇ ತಮ್ಮ ಪಾಲನ್ನು ಪಡೆಯುತ್ತಾರೆ ಎಂದು ನಾನು ನಿರೀಕ್ಷಿಸುತ್ತಿದ್ದೇನೆ " ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ .
ತಡವಾಗಿದ್ದೇಕೆ ಎಂದು ಪ್ರಶ್ನಿಸಿದ್ದಕ್ಕೆ, ನಾವು ಬಹುಮಾನದ ಮೊತ್ತವನ್ನು ಕಳೆದ ವರ್ಷದ ಕೊನೆಯಲ್ಲಿ ಸ್ವೀಕರಿಸಿದ್ದೆವು ಎಂದಿದ್ದಾರೆ. ಅಲ್ಲದೆ ಕಳೆದ ವರ್ಷ ಕೆಲವು ತಿಂಗಳು ಬಿಸಿಸಿಐ ಕೋವಿಡ್ 19 ಕಾರಣದಿಂದ ಮುಚ್ಚಲ್ಪಟ್ಟಿತ್ತು.
ಇದಲ್ಲದೆ ಎಲ್ಲಾ ವಯೋಮಾನದ ಕ್ರಿಕೆಟಿಗರ ವೇತನ ಕೂಡ ವಿಳಂಬವಾಗಿದೆ, ಕೇವಲ ಮಹಿಳಾ ಕ್ರಿಕೆಟಿಗರ ಮೊತ್ತ ಮಾತ್ರವಲ್ಲ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ:ಹರಿದ ಶೂ ರಿಪೇರಿ ಮಾಡಿಕೊಳ್ಳುತ್ತಿದ್ದ ಜಿಂಬಾಬ್ವೆ ಕ್ರಿಕೆಟಿಗರ ನೆರವಿಗೆ ಬಂದ ಪ್ಯೂಮಾ