ಬಲಾಢ್ಯ ಬ್ಯಾಟ್ಸ್ಮನ್ಗಳನ್ನು ತಮ್ಮ ಸ್ಪಿನ್ ಮೋಡಿಯಿಂದ ಕಟ್ಟಿ ಹಾಕುವ ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಇತ್ತೀಚಿನ ದಿನಗಳಲ್ಲಿ ತಮ್ಮ ಪತ್ನಿ ಧನಶ್ರೀ ಅವರಿಂದ ನೃತ್ಯ ಕಲಿಯುತ್ತಿದ್ದಾರೆ.
ಚಹಾಲ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪತ್ನಿ ಧನಶ್ರೀ ವರ್ಮಾ ಅವರೊಂದಿಗೆ ನೃತ್ಯ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಚಹಾಲ್ ಮತ್ತು ಧನಶ್ರೀ 13 ಸೆಕೆಂಡುಗಳ ಮ್ಯೂಸಿಕ್ ಒಂದಕ್ಕೆ ಆಕರ್ಷಕವಾಗಿ ಹೆಜ್ಜೆ ಹಾಕಿದ್ದಾರೆ.
ಧನಶ್ರೀ ವೃತ್ತಿಪರ ನರ್ತಕಿ ಹಾಗೂ ನೃತ್ಯ ಸಂಯೋಜಕಿಯೂ ಹೌದು. ಹಾಗಾಗಿ ಚಹಾಲ್ ಇಂದು ತನ್ನ ಪತ್ನಿಯಿಂದ ನೃತ್ಯ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ. ಇವರಿಬ್ಬರ ನೃತ್ಯ ಕ್ಲಾಸಿಯಾಗಿದ್ದು ಅಭಿಮಾನಿಗಳು ಖುಷ್ ಆಗಿದ್ದಾರೆ.
'ವಿದ್ಯಾರ್ಥಿ ನಿಧಾನವಾಗಿ ಮಾಸ್ಟರ್ ಆಗುತ್ತಿದ್ದಾನೆ' ಎಂದು ಗೌರವ್ ಕಪೂರ್ ಎಂಬ ನೆಟ್ಟಿಗ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಗಾಯಕ ಜಾಸ್ಸಿ ಗಿಲ್, 'ನಿಮ್ಮ ಸ್ಮೈಲ್ ಚೆನ್ನಾಗಿದೆ ಸಹೋದರ' ಎಂದು ಬರೆದಿದ್ದಾರೆ. ಇನ್ನು ಅವರ ಕೆಲವು ಅಭಿಮಾನಿಗಳು, 'ಬೈಯ್ಯಾ ನೀವು ಕ್ರಿಕೆಟ್ ಬಿಡುವುದಿಲ್ವಲ್ಲಾ? ಎಂದು ಕಾಲೆಳೆದಿದ್ದಾರೆ.
ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ 2020ರ ಡಿಸೆಂಬರ್ನಲ್ಲಿ ವಿವಾಹವಾದರು. ಧನಶ್ರೀ ವರ್ಮಾ ವೃತ್ತಿಯಲ್ಲಿ ವೈದ್ಯರು ಕೂಡಾ ಹೌದು. ಇದರ ಜೊತೆಗೆ, ಅವರು ನೃತ್ಯ ಸಂಯೋಜಕಿ ಮತ್ತು ಯೂಟ್ಯೂಬರ್ ಕೂಡ ಆಗಿದ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.