ಇಸ್ಲಾಮಾಬಾದ್: ಮುಂದಿನ ತಿಂಗಳು ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಲಿರುವ ಸೀಮಿತ ಓವರ್ಗಳ ಸರಣಿಯ ನೇರಪ್ರಸಾರ ಪಾಕಿಸ್ತಾನದಲ್ಲಿ ಲಭ್ಯ ಇರುವುದಿಲ್ಲ ಎಂದು ಪಾಕಿಸ್ತಾನ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಚೌದರಿ ತಿಳಿಸಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆಯುವ ಪಂದ್ಯಗಳನ್ನ ದಕ್ಷಿಣ ಏಷ್ಯಾದಲ್ಲಿ ನೇರಪ್ರಸಾರ ಮಾಡುವ ಹಕ್ಕನ್ನು ಭಾರತೀಯ ಕಂಪನಿಗಳು ಪಡೆದಿವೆ. ಆದ್ದರಿಂದ ಪಾಕಿಸ್ತಾನದಲ್ಲಿ ನೇರಪ್ರಸಾರವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
2019 ಆಗಸ್ಟ್ 5ರಿಂದ ಭಾರತ ಸರ್ಕಾರ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡಿದೆ. ಅದನ್ನು ವಿಭಜಿಸಿ ಎರಡು ಕೇಂದ್ರಾಳಿತ ಪ್ರದೇಶವನ್ನಾಗಿ ಮಾಡಿದೆ. ಆ ನಿರ್ಧಾರವನ್ನು ಭಾರತ ಸರ್ಕಾರ ವಾಪಸ್ ತೆಗೆದುಕೊಂಡ ಬಳಿಕವಷ್ಟೇ ಭಾರತೀಯ ಕಂಪನಿಗಳೊಂದಿಗೆ ವ್ಯವಹಾರ ನಡೆಸಲಾಗುವುದು ಎಂದು ಚೌದರಿ ತಿಳಿಸಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಪಂದ್ಯಗಳನ್ನು ಪ್ರಸಾರ ಮಾಡುವ ಹಕ್ಕನ್ನು ಹೊಂದಿರುವ ಭಾರತೀಯ ಪ್ರಸಾರಕರಾದ ಸ್ಟಾರ್ ಮತ್ತು ಏಷ್ಯಾದೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕೆಂದು ಪಾಕಿಸ್ತಾನ ಟೆಲಿವಿಷನ್ ಕಾರ್ಪೊರೇಶನ್‌ನ (ಪಿಟಿವಿ) ಮಾಡಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ.
" ದಕ್ಷಿಣ ಏಷ್ಯಾದಲ್ಲಿ ಪಂದ್ಯಗಳನ್ನು ಪ್ರಸಾರ ಮಾಡುವ ಹಕ್ಕನ್ನು ಭಾರತೀಯ ಕಂಪನಿಗಳು ಹೊಂದಿವೆ. ಆದರೆ, ನಾವು ಯಾವುದೇ ಭಾರತೀಯ ಕಂಪನಿಯೊಂದಿಗೆ ವ್ಯವಹಾರ ನಡೆಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.
ಆದರೆ, ಪಾಕಿಸ್ತಾನ ಇದಕ್ಕೆ ಬೇರೆ ದಾರಿಯನ್ನು ಕಂಡುಕೊಳ್ಳಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ಗೆ ಮನವಿ ಮಾಡಲಿದ್ದೇವೆ. ಆದರೆ ಭಾರತದೊಂದಿಗಿನ ಸಂಬಂಧವನ್ನು ಪುನಃ ಆರಂಭಿಸುವುದು ಆಗಸ್ಟ್ 5 ರಂದು ಅವರು ತೆಗೆದುಕೊಂಡಿರುವ ನಿರ್ಧಾರವನ್ನು ಹಿಂತೆಗೆದುಕೊಂಡ ನಂತರವಷ್ಟೇ ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಭಾರತ ಗೆದ್ದ ಬಾರ್ಡರ್-ಗವಾಸ್ಕರ್ ಟ್ರೋಫಿಗೆ 'ಸಾರ್ವಕಾಲಿಕ ಟೆಸ್ಟ್ ಸರಣಿ' ಪಟ್ಟ