ಮೊಹಾಲಿ: ಬ್ಯಾಟಿಂಗ್ ದಂತಕತೆ ಸುನಿಲ್ ಗವಾಸ್ಕರ್ ಅವರು ರೋಹಿತ್ ಶರ್ಮಾರ ಟೆಸ್ಟ್ ನಾಯಕತ್ವದ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೊದಲ ಪಂದ್ಯದಲ್ಲೇ ನೂತನ ನಾಯಕ ಫೀಲ್ಡಿಂಗ್ ಸೆಟ್ ಮಾಡುವುದರಲ್ಲಿ ಮತ್ತು ಬೌಲರ್ಗಳ ಬದಲಾವಣೆಯಲ್ಲಿ ಚಾಣಾಕ್ಷತನ ತೋರಿದ್ದಾರೆ ಎಂದರು.
ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ 574/8 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತ್ತು. ನಂತರ ಪ್ರವಾಸಿ ಶ್ರೀಲಂಕಾ ತಂಡವನ್ನು 174 ಮತ್ತು 178ರನ್ಗಳಿಗೆ ಆಲೌಟ್ ಮಾಡುವ ಮೂಲಕ ಇನ್ನಿಂಗ್ಸ್ ಮತ್ತು 222 ರನ್ಗಳ ಜಯ ಸಾಧಿಸಿತ್ತು.
ಪಂದ್ಯದ ನಡುವೆ ರೋಹಿತ್ ಶರ್ಮಾ ಕೆಲವು ಬಲವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರು. ಉದಾಹರಣೆಗೆ ಎರಡನೇ ಇನ್ನಿಂಗ್ಸ್ನಲ್ಲಿ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಹೆಚ್ಚಿನ ಬೌಲಿಂಗ್ ನೀಡಲಿಲ್ಲ, ಜೊತೆಗೆ ಎದುರಾಳಿ ಬ್ಯಾಟರ್ಗಳು ಜಡೇಜಾ ಮತ್ತು ಅಶ್ವಿನ್ಗೆ ಪರದಾಡುತ್ತಿದ್ದರೂ ಜಯಂತ್ ಯಾದವ್ಗೆ ಚೆಂಡು ನೀಡುತ್ತಿದ್ದದ್ದು ಗಮನಾರ್ಹವಾಗಿತ್ತು.
"ರೋಹಿತ್ ಶರ್ಮಾ ನಾಯಕನಾಗಿ ಅದ್ಭುತವಾಗಿ ಪದಾರ್ಪಣೆ ಮಾಡಿದ್ದಾರೆ. ನೀವು 3 ದಿನಗಳ ಒಳಗೆ ಟೆಸ್ಟ್ ಜಯಿಸಿದರೆ, ಅದು ನಿಮ್ಮ ತಂಡದ ಶ್ರೇಷ್ಠತೆಯನ್ನು ತೋರುತ್ತದೆ. ಅತಿ ಮುಖ್ಯವಾಗಿ ಭಾರತದ ಫೀಲ್ಡಿಂಗ್, ಬೌಲಿಂಗ್ ಬದಲಾವಣೆ ಅತ್ಯಾಕರ್ಷಕವಾಗಿತ್ತು. ಫೀಲ್ಡರ್ ಎಲ್ಲಿ ನಿಲ್ಲುತ್ತಿದ್ದರೋ ಅಲ್ಲಿಗೆ ಕ್ಯಾಚ್‌ಗಳು ಹೋಗುತ್ತಿದ್ದವು. ಫೀಲ್ಡರ್ಗಳು ಹೆಚ್ಚೇನೂ ಓಡುವ ಅಗತ್ಯವಿರಲಿಲ್ಲ. ಇದು ಕ್ಷೇತ್ರರಕ್ಷಣೆಯ ಸಂಯೋಜನೆಯನ್ನು ಎತ್ತಿ ತೋರಿಸುತ್ತದೆ" ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್ಗೆ ವಿವರಿಸಿದರು.
ಇನ್ನು ಬೌಲಿಂಗ್ ಬದಲಾವಣೆಯ ಬಗ್ಗೆ ಹೇಳುವುದಾದರೆ, ರವೀಂದ್ರ ಜಡೇಜಾ ಅವರನ್ನು ಮೊದಲ ಇನ್ನಿಂಗ್ಸ್ನಲ್ಲಿ ಏಕೆ ತಡವಾಗಿ ತರಲಾಯಿತು ಎಂದು ನೀವು ವಾದಿಸಬಹುದು, ಆದರೂ ಅಂತಿಮವಾಗಿ ಭಾರತ ಇನ್ನೂ 2 ದಿನಗಳು ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು. ಹಾಗಾಗಿ ನಾನು ರೋಹಿತ್ ನಾಯಕತ್ವಕ್ಕೆ 10ಕ್ಕೆ 9.5 ಅಂಕವನ್ನು ನೀಡುತ್ತೇನೆ ಎಂದು ಗವಾಸ್ಕರ್ ಹೇಳಿದ್ದಾರೆ.
ಇದನ್ನೂ ಓದಿ:ವಾರ್ನ್ ಮ್ಯಾಜಿಕ್ ಎಸೆತಗಳ ಸೃಷ್ಟಿಕರ್ತ ನಿಜ, ಆದರೆ ವಿಶ್ವದ ಶ್ರೇಷ್ಠ ಸ್ಪಿನ್ನರ್ ಎನ್ನಲಾಗದು: ಗವಾಸ್ಕರ್