ಹೈದರಾಬಾದ್: ಕಳೆದ ಮೂರು ವರ್ಷಗಳಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಎ ಮತ್ತು ರಣಜಿ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶಾರ್ದೂಲ್ ಠಾಕೂರ್ ಅವರನ್ನು ಭಾರತ ತಂಡದ ಮೂರನೇ ವೇಗಿಯಾಗಿ ಆಯ್ಕೆ ಮಾಡಿಕೊಳ್ಳಬೇಕಿದೆ ಎಂದು ಬಾಲ್ಯದ ಕೋಚ್ ದಿನೇಶ್ ಲಾಡ್ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಮೂರನೇ ಟೆಸ್ಟ್ ಪಂದ್ಯಕ್ಕಾಗಿ ನವದೀಪ್ ಸೈನಿ, ನಟರಾಜನ್ ಮತ್ತು ಠಾಕೂರ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಮೂವರಲ್ಲಿ ಯಾರಿಗೆ ಆದ್ಯತೆ ನೀಡಬೇಕೆಂಬ ಪ್ರಶ್ನೆಗೆ ಉತ್ತರಿಸಿದ ಲಾಡ್, ಠಾಕೂರ್ ದೇಶೀಯ ಕ್ರಿಕೆಟ್‌ನಲ್ಲಿ ಕೆಂಪು ಚೆಂಡಿನೊಂದಿಗೆ ಉತ್ತಮ ಪ್ರದರ್ಶನ ತೋರಿದ್ದಾರೆ. ರಣಜಿ ಟ್ರೋಫಿಯಲ್ಲಿ ಸಾಕಷ್ಟು ವಿಕೆಟ್‌ಗಳನ್ನು ಪಡೆದಿದ್ದಾರೆ. ನಟರಾಜನ್, ಸೈನಿಗಿಂತ ಶಾರ್ದೂಲ್ಗೆ ಹೆಚ್ಚು ಆದ್ಯತೆ ನೀಡುತ್ತೇನೆ. ಆಡುವ 11ರ ಬಳಗಕ್ಕೆ ಶಾರ್ದೂಲ್ ಠಾಕೂರ್ ಆಯ್ಕೆ ಉತ್ತಮ ಎಂದರು.
ಇದನ್ನೂ ಓದಿ...3ನೇ ಟೆಸ್ಟ್ಗೆ ಶಾರ್ದುಲ್ ಅಥವಾ ಸೈನಿ? ಗೊಂದಲದಲ್ಲಿ ಟೀಮ್ ಮ್ಯಾನೇಜ್ಮೆಂಟ್
ಠಾಕೂರ್ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಹಲವು ಕಾರಣಗಳನ್ನು ನೀಡಲು ಇಚ್ಛಿಸುತ್ತೇನೆ. ಹೊಸ ಚೆಂಡನ್ನು ಸ್ವಿಂಗ್ ಮಾಡುವುದು ಹೇಗೆಂದು ಅವರಿಗೆ ಗೊತ್ತಿದೆ. ಈಗಾಗಲೇ ಅವರು ಆಸ್ಟ್ರೇಲಿಯಾದಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಅಲ್ಲಿ ಯಶಸ್ವಿಯೂ ಆಗಿದ್ದಾರೆ. ಅವರು 140 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ ಎಂದರು. ಮೂರನೇ ಟೆಸ್ಟ್ ಪಂದ್ಯ ಜ. 7ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಬೆಳಗ್ಗೆ 5 ಗಂಟೆಗೆ (ಭಾರತೀಯ ಕಾಲಮಾನ) ಪ್ರಾರಂಭವಾಗುತ್ತದೆ.
ಸರಣಿಗೂ ಮೊದಲು ಅನುಭವಿ ಇಶಾಂತ್ ಶರ್ಮಾ ತಂಡದಿಂದ ಹೊರಬಿದ್ದರು. ಮೊದಲ ಟೆಸ್ಟ್ ಪಂದ್ಯ ಸೋತ ನಂತರ ಮೊಹಮ್ಮದ್ ಶಮಿ ಗಾಯಗೊಂಡರು. ಮೊದಲೆರಡು ಪಂದ್ಯಗಳಲ್ಲಿ ಆಡಿದ್ದ ಉಮೇಶ್ ಯಾದವ್ ಈಗ ಗಾಯದಿಂದ ಬಳಲುತ್ತಿದ್ದಾರೆ. ಈಗವರ ಸ್ಥಾನವನ್ನು ಎಡಗೈ ವೇಗಿ ಟಿ.ನಟರಾಜನ್ ತುಂಬಲಿದ್ದಾರೆ ಎಂದು ಈಗಾಗಲೇ ಬಿಸಿಸಿಐ ಹೇಳಿದೆ. ಈ ಮೂಲಕ ಪದಾರ್ಪಣೆ ಕೂಡ ಮಾಡಲಿದ್ದಾರೆ. ಅಲ್ಲದೆ, ಮುಂದಿನ ಟೆಸ್ಟ್ ಪಂದ್ಯಕ್ಕೆ ಮೂರನೇ ವೇಗಿಯಾಗಿ ಸೈನಿ ಅಥವಾ ಶಾರ್ದೂಲ್ರನ್ನು ಕಣಕ್ಕಿಳಿಸುವ ಚಿಂತನೆ ಬಿಸಿಸಿಐ ನಡೆಸಿದೆ.