India WTC Tour: ಭಾರತದ ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹಾದಿ ಹೀಗಿದೆ.. - WTC match
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023ರಲ್ಲಿ ಭಾರತ ಸೋಲು ಕಂಡಿದೆ. ಮುಂದಿನ ಎರಡು ವರ್ಷಕ್ಕೆ ಮತ್ತೆ ಚಾಂಪಿಯನ್‌ಶಿಪ್ ನಡೆಯಲಿದೆ. ಭಾರತದ ಪಂದ್ಯಗಳು ಹೀಗಿವೆ...

2023ರ ವಿಶ್ವ ಕ್ರಿಕೆಟ್ ಟೆಸ್ಟ್ ಚಾಂಪಿಯನ್‌ಶಿಪ್ ಮುಕ್ತಾಯಗೊಂಡಿದೆ. ಭಾರತದ ಸೋಲಿಗೆ ಹಲವು ಕಾರಣಗಳನ್ನು ಚರ್ಚಿಸಲಾಗುತ್ತಿದೆ. ಆರ್. ಅಶ್ವಿನ್ ಅವರನ್ನು ಆಡುವ 11ರ ಬಳಗದಲ್ಲಿ ಆಡಿಸದೇ ಇರುವುದು, ಬ್ಯಾಟಿಂಗ್ ವೈಫಲ್ಯ, ಅನುಭವಿ ಆಟಗಾರರ ತಪ್ಪು ಶಾಟ್ ಸೆಲೆಕ್ಷನ್, ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ರನ್ ಬಿಟ್ಟುಕೊಟ್ಟಿದ್ದು ಸೇರಿದಂತೆ ಈ ಎಲ್ಲವೂ ಸೋಲಿಗೆ ಪ್ರಮುಖ ಕಾರಣಗಳೇ ಎನ್ನಲಾಗುತ್ತಿದೆ.
ಇನ್ನೆರಡು ವರ್ಷಕ್ಕೆ ಮತ್ತೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪೈಪೋಟಿ ನಡೆಯಲಿದೆ. 2023 ರಿಂದ 2025ರ ನಡುವೆ ಭಾರತಕ್ಕಿರುವ ಅವಕಾಶಗಳೇನು?. ಭಾರತ ಯಾವ ರೀತಿಯಲ್ಲಿ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಬಹುದು ಎಂಬ ಲೆಕ್ಕಾಚಾರ ಮಾಡೋಣ. ಭಾರತ ಕ್ರಿಕೆಟ್ ತಂಡದಲ್ಲಿ ಮಹತ್ವದ ಬದಲಾವಣೆ ಸಾಧ್ಯತೆಯೂ ಇದೆ.
ನಾಯಕತ್ವ ಬದಲಾಗಬಹುದೇ?: ವಿರಾಟ್ ಕೊಹ್ಲಿ ನಾಯಕತ್ವ ಪಟ್ಟದಿಂದ ಇಳಿದ ನಂತರ ರೋಹಿತ್ ಶರ್ಮಾಗೆ ಜವಾಬ್ದಾರಿ ನೀಡಲಾಯಿತು. 36 ವರ್ಷದ ರೋಹಿತ್ ಶರ್ಮಾ ಈ ವರ್ಷ ಭಾರತದಲ್ಲಿ ನಡೆಯುವ ವಿಶ್ವಕಪ್ ನಂತರ ನಾಯಕತ್ವದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ. ಆದರೆ ಇದರಲ್ಲಿ ಸೋಲು- ಗೆಲುವಿನ ಲೆಕ್ಕಾಚಾರವಿದೆ.
ವಿರಾಟ್ ಕೊಹ್ಲಿ ನಾಲ್ಕು ಐಸಿಸಿ ಟ್ರೋಫಿಗಳಲ್ಲಿ ಸೋತಾಗ ಅವರನ್ನು ಟೀಕಿಸಲಾಗಿತ್ತು. ಇದರ ಬೆನ್ನಲ್ಲೇ ವಿರಾಟ್ ನಾಯಕತ್ವದಿಂದ ಸ್ವಯಂ ನಿವೃತ್ತಿ ಪ್ರಕಟಿಸಿ ತಂಡದಲ್ಲಿ ಆಟಗಾರನಾಗಿ ಮಾತ್ರ ಉಳಿದರು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ 2022ರ ಟಿ20 ವಿಶ್ವಕಪ್ ಮತ್ತು 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಸೋಲು ಕಂಡಿತು. 2023ರ ಏಕದಿನ ವಿಶ್ವಕಪ್ ಭಾರತದಲ್ಲೇ ನಡೆಯಲಿದೆ. ಇದು ಟೀಂ ಇಂಡಿಯಾಕ್ಕೆ ಮಹತ್ವದ್ದು. 2013ರ ನಂತರ ಯಾವುದೇ ಐಸಿಸಿ ಟ್ರೋಫಿಯನ್ನು ಗೆದ್ದಿರದ ಭಾರತ ಸತತ 8 ಟ್ರೋಫಿಗಳನ್ನು ಕಳೆದುಕೊಂಡಿದೆ. ಹೀಗಿರುವಾಗ ತವರಿನಲ್ಲಿ ನಡೆಯುವ ಪಂದ್ಯಗಳನ್ನು ರೋಹಿತ್ ಶರ್ಮಾ ಗೆಲ್ಲಿಸಿ ಕಪ್ ಎತ್ತುವರೇ ಎಂಬುದು ಕುತೂಹಲ.
ಟೆಸ್ಟ್ ಚಾಂಪಿಯನ್ ಶಿಪ್ ಪ್ರವಾಸ: 2023- 2025ರ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತದ ಫೈನಲ್ ಪ್ರವೇಶಕ್ಕೆ ಹಾದಿ ಕಠಿಣ. ಮೊದಲೆರಡು ಪ್ರಯತ್ನದ ರೀತಿಯಲ್ಲಿ ಸುಲಭವಾಗಿ ಫೈನಲ್ಗೆ ಎಂಟ್ರಿ ಕಷ್ಟ ಸಾಧ್ಯ. ಏಕೆಂದರೆ ಈ ಬಾರಿ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಭಾರತ ವಿದೇಶಿ ನೆಲದಲ್ಲಿಯೇ ಆಡಲಿದೆ. ಟೆಸ್ಟ್ ಚಾಂಪಿಯನ್ಶಿಪ್ನ ಆರು ಸರಣಿಗಳ ಪೈಕಿ ಭಾರತ ಮೂರನ್ನು ತವರಿನಲ್ಲಿ ಆಡಿದರೆ ಮತ್ತೆ ಮೂರನ್ನು ಪ್ರವಾಸಿ ದೇಶದಲ್ಲಿ ಆಡುತ್ತದೆ.
ತವರಿನಲ್ಲಿ ಭಾರತ ಬಾಂಗ್ಲಾದೇಶ ವಿರುದ್ಧ 2, ಇಂಗ್ಲೆಂಡ್ ವಿರುದ್ಧ 5 ಹಾಗೂ ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಜುಲೈ 12 ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ಅಲ್ಲಿ ಎರಡು ಟೆಸ್ಟ್ಗಳನ್ನು ಆಡುತ್ತದೆ. ದಕ್ಷಿಣ ಆಫ್ರಿಕಾ ವಿರುದ್ಧ 2 ಮತ್ತು ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳಿಗೆ ಪ್ರವಾಸ ಮಾಡಲಿದೆ.
ಭಾರತಕ್ಕೆ ಬರುವ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಟಫ್ ಫೈಟ್ ನೀಡಲಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ಭಾರತಕ್ಕೆ ಹೆಚ್ಚೂ ಕಡಿಮೆ ಗೆಲುವು ದೂರದ ಮಾತೇ ಎನ್ನುವುದು ಕ್ರಿಕೆಟ್ ತಜ್ಞರ ಭವಿಷ್ಯ ನುಡಿ. ಜುಲೈ 12ರಿಂದ ವೆಸ್ಟ್ ಇಂಡೀಸ್ನಲ್ಲಿ ಭಾರತ ಹೇಗೆ ಆಡಲಿದೆ ಎಂಬುದು ಮತ್ತು ತಂಡದಲ್ಲಿ ಏನೆಲ್ಲ ಬದಲಾವಣೆ ಆಗಬಹುದು ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: WTC Final: ಆಯ್ಕೆಯ ಮಾನದಂಡ ಆಟಗಾರನ ಅರ್ಹತೆಯೋ, ಮೈದಾನವೋ? : ಸುನಿಲ್ ಗವಾಸ್ಕರ್