ಹೈದರಾಬಾದ್: ಐಸಿಸಿ ಟಿ-20 ವಿಶ್ವಕಪ್ ಆರಂಭಗೊಳ್ಳುವುದಕ್ಕೂ ಮುಂಚೆ ಟೀಂ ಇಂಡಿಯಾ ಆಸ್ಟ್ರೇಲಿಯಾದ ವಿರುದ್ಧ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ಈ ಟೂರ್ನಿ ಆಯೋಜನೆಗೊಳ್ಳಲಿದೆ. ಇದಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿ ಮಾತ್ರ ಬಿಡುಗಡೆಯಾಗಬೇಕಾಗಿದೆ.
ಇದೇ ವರ್ಷ ಆಸ್ಟ್ರೇಲಿಯಾ ತಂಡ ಜಿಂಬಾಬ್ವೆ, ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಇದರ ಬೆನ್ನಲ್ಲೇ ಸೆಪ್ಟೆಂಬರ್ ತಿಂಗಳಲ್ಲಿ ಭಾರತ ಪ್ರವಾಸ ಕೈಗೊಂಡು, ದ್ವಿಪಕ್ಷೀಯ ಸರಣಿಯಲ್ಲಿ ಪಾಲ್ಗೊಳ್ಳಲಿದೆ.
ಜೂನ್ 9ರಿಂದ 19ರವರೆಗೆ ಟೀಂ ಇಂಡಿಯಾ ತವರು ನಾಡಿನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಐದು ಟಿ20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದ್ದು, ಅದಕ್ಕಾಗಿ ಈಗಾಗಲೇ ವೇಳಾಪಟ್ಟಿ ಸಹ ಪ್ರಕಟಗೊಂಡಿದೆ. ಇದಾದ ಬಳಿಕ ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳು ಆಯೋಜನೆಗೊಂಡಿವೆ. ಜುಲೈ 1ರಿಂದ ಭಾರತ-ಇಂಗ್ಲೆಂಡ್ ನಡುವೆ ಏಕೈಕ ಟೆಸ್ಟ್ ಪಂದ್ಯ(ಕಳೆದ ವರ್ಷ ಕೋವಿಡ್ನಿಂದ ಬಾಕಿ ಉಳಿದುಕೊಂಡಿರುವ ಪಂದ್ಯ) ನಡೆಯಲಿದೆ.
ಇದನ್ನೂ ಓದಿ: ಮಹತ್ವದ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದ ಕೋಲ್ಕತ್ತಾ... ಪ್ಲೇ-ಆಫ್ ಆಸೆ ಜೀವಂತ
ಅಕ್ಟೋಬರ್ ತಿಂಗಳಲ್ಲಿ ಟಿ20 ವಿಶ್ವಕಪ್ ಆಯೋಜನೆಗೊಂಡಿದ್ದು, ಐಸಿಸಿಯಿಂದ ಅದರ ವೇಳಾಪಟ್ಟಿ ಸಹ ಪ್ರಕಟಗೊಂಡಿದೆ.