ಅಹ್ಮದಾಬಾದ್(ಗುಜರಾತ್) : ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ಐತಿಹಾಸಿಕ 1000ನೇ ಏಕದಿನ ಪಂದ್ಯವನ್ನಾಡಲು ಸಜ್ಜಾಗಿದೆ. ಈ ಮೂಲಕ ಇಷ್ಟೊಂದು ಪಂದ್ಯಗಳನ್ನಾಡಿರುವ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಗುಜರಾತ್ನ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐತಿಹಾಸಿಕ ಸಾವಿರನೇ ಪಂದ್ಯ ನಡೆಯಲಿದೆ. 48 ವರ್ಷಗಳ ಬಳಿಕ ಸಾವಿರ ಪಂದ್ಯ ಆಡಲು ಟೀಂ ಇಂಡಿಯಾ ಸಜ್ಜಾಗಿದೆ. ಐತಿಹಾಸಿಕ ಮೈಲುಗಲ್ಲು ಸೃಷ್ಟಿ ಮಾಡಲು ಸಜ್ಜುಗೊಂಡಿರುವ ಟೀಂ ಇಂಡಿಯಾ ಶುಭಾಶಯ ತಿಳಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, 1000ನೇ ಏಕದಿನ ಪಂದ್ಯ ಆಡುತ್ತಿರುವುದು ಒಂದು ದೊಡ್ಡ ಮೈಲಿಗಲ್ಲು.
ಭಾರತದ ಪರ ಕ್ರಿಕೆಟ್ ಆಡಿರುವ ಪ್ಲೇಯರ್ಸ್, ಮಂಡಳಿ ಸದಸ್ಯರಿಂದ ಮಾತ್ರ ಇಂತಹ ಸಾಧನೆ ಸಾಧ್ಯವಾಗಿದೆ. ಈ ವೇಳೆ ಭಾರತೀಯ ಕ್ರಿಕೆಟ್ ತಂಡದ ಹಿತೈಷಿ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಇದು ನಮ್ಮೆಲ್ಲರ ಸಾಧನೆಯಾಗಿದ್ದು, ಇಡೀ ರಾಷ್ಟ್ರ ಹೆಮ್ಮೆ ಪಡಬೇಕು. ಮುಂಬರುವ ಸರಣಿ ಹಾಗೂ 1000ನೇ ಪಂದ್ಯಕ್ಕಾಗಿ ನಾನು ತಂಡಕ್ಕೆ ಶುಭ ಹಾರೈಕೆ ಮಾಡುತ್ತೇನೆ ಎಂದು ತೆಂಡೂಲ್ಕರ್ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಮೂರು ಏಕದಿನ ಪಂದ್ಯಗಳಿಗೆ ಕ್ರೀಡಾಭಿಮಾನಿಗಳಿಗೆ ಅವಕಾಶ ನೀಡಿಲ್ಲ. ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯಗಳು ನಡೆಯಲಿವೆ. ಈಗಾಗಲೇ ಉಭಯ ತಂಡಗಳು ಮೈದಾನದಲ್ಲಿ ಅಭ್ಯಾಸ ಆರಂಭ ಮಾಡಿವೆ.
ಇದನ್ನೂ ಓದಿರಿ: U19 World Cup: ಶಿಖರ್ ಧವನ್ ದಾಖಲೆ ಬ್ರೇಕ್ ಮಾಡಿದ 'ಬೇಬಿ ಎಬಿ'!
1974ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯವನ್ನಾಡಿದ್ದ ಟೀಂ ಇಂಡಿಯಾ ಇದೀಗ ಸಾವಿರನೇ ಪಂದ್ಯವನ್ನಾಡುತ್ತಿದ್ದು, 958 ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ ಎರಡನೇ ಸ್ಥಾನ, 936 ಪಂದ್ಯಗಳನ್ನಾಡಿರುವ ಪಾಕ್ ಮೂರನೇ ಸ್ಥಾನ, 870 ಪಂದ್ಯಗಳನ್ನಾಡಿರುವ ಶ್ರೀಲಂಕಾ 4ನೇ ಸ್ಥಾನದಲ್ಲಿವೆ.
ವಿಶೇಷವೆಂದರೆ ಟೀಂ ಇಂಡಿಯಾ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರತದ ಪರ 200,300,400,500,600,700 ಮತ್ತು 800ನೇ ಪಂದ್ಯಗಳಲ್ಲಿ ಆಡಿದ್ದರು ಎಂಬುದು ಗಮನಾರ್ಹ ಸಂಗತಿ. ಸಾವಿರ ಪಂದ್ಯಗಳನ್ನಾಡಲು ಸಜ್ಜಾಗಿರುವ ಟೀಂ ಇಂಡಿಯಾ ಪರ 26 ನಾಯಕರು ತಂಡ ಮುನ್ನಡೆಸಿದ್ದು, 242 ಪ್ಲೇಯರ್ಸ್ ಭಾರತದ ಪರ ಏಕದಿನ ಪಂದ್ಯಗಳನ್ನಾಡಿದ್ದಾರೆ.