ಕಾನ್ಪುರ: ನ್ಯೂಜಿಲ್ಯಾಂಡ್ ವಿರುದ್ಧ ಗುರುವಾರದಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಭಯರಹಿತ ಬ್ಯಾಟಿಂಗ್ ಮಾಡುವುದರತ್ತ ನನ್ನ ಗಮನ. ಆದರೆ ನನ್ನ ಬ್ಯಾಟಿಂಗ್ ತಂತ್ರಗಾರಿಕೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವುದಿಲ್ಲ ಎಂದು ಭಾರತ ತಂಡದ ಸ್ಟಾರ್ ಬ್ಯಾಟರ್ ಚೇತೇಶ್ವರ್ ಪೂಜಾರ ಹೇಳಿದ್ದಾರೆ.
'ಕಿವೀಸ್ ವಿರುದ್ಧ ಭಯವಿಲ್ಲದೆ ಆಡುವೆ'
ಕಾನ್ಪುರ ಟೆಸ್ಟ್ಗೂ ಮುನ್ನ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪೂಜಾರ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನನ್ನ ಆಲೋಚನಾ ವಿಧಾನವನ್ನು ಬದಲಾಯಿಸಿಕೊಂಡಿದ್ದೆ. ಅಲ್ಲಿ ನಾನು ಯಾವುದೇ ಭಯವಿಲ್ಲದೆ ಆಡಿದೆ. ಆದರೆ ಅಲ್ಲಿ ನಾನು ನನ್ನ ಬ್ಯಾಟಿಂಗ್ನಲ್ಲಿನ ಯಾವುದೇ ತಂತ್ರಗಾರಿಕೆಯನ್ನು ಬದಲಾಯಿಸಿಕೊಳ್ಳಲಿಲ್ಲ. ಮುಂಬರುವ ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಇಂಗ್ಲೆಂಡ್ ಸರಣಿಯಲ್ಲಿ ಆಡಿದಂತೆ ಯಾವುದೇ ಭಯವಿಲ್ಲದೆ ಆಡುತ್ತೇನೆ ಎಂದು ತಿಳಿಸಿದ್ದಾರೆ.
'ನಾನು ಶತಕದ ಬಗ್ಗೆ ಯೋಚಿಸುವುದಿಲ್ಲ'
ಇನ್ನು ಕಳೆದ ಮೂರು ವರ್ಷಗಳಿಂದ ಶತಕದ ಬರವನ್ನು ಎದುರಿಸುತ್ತಿರುವ ಬಗ್ಗೆ ಮಾತನಾಡಿ, ನಾನು ಶತಕದ ಬಗ್ಗೆ ಆಲೋಚಿಸುವುದಿಲ್ಲ. ನಾನು 50, 80 , 90 ರನ್ಗಳಿಸುತ್ತಿದ್ದೇನೆ. ತಂಡಕ್ಕೆ ಅದು ಸಾಕಷ್ಟು ನೆರವಾಗುತ್ತಿದೆ. ನನಗೆ ಅಷ್ಟೇ ಸಾಕು, ಶತಕಕ್ಕಿಂತಲೂ ತಂಡಕ್ಕೆ ನಾನು ಗಳಿಸುವ ರನ್ಗಳಿಂದ ಅನುಕೂಲವಾದರೆ, ಅದರಲ್ಲೇ ನನಗೆ ಸಾಕಷ್ಟು ತೃಪ್ತಿ ಸಿಗುತ್ತದೆ ಎಂದು ಪೂಜಾರ ತಿಳಿಸಿದ್ದಾರೆ.
'ಅಧಿಕಾರಕ್ಕಿಂತ ಭಾರತ ತಂಡಕ್ಕೆ ನನ್ನ ಪ್ರಾಮುಖ್ಯತೆ'
ಉಪನಾಯಕನ ಜವಾಬ್ದಾರಿ ಸಿಕ್ಕಿರುವುದರ ಬಗ್ಗೆ ಮಾತನಾಡುತ್ತಾ, ನಾನು ಯಾವುದೇ ನಿರ್ದಿಷ್ಠ ಪಟ್ಟ ಇಲ್ಲದಿದ್ದಾಗಲೂ ತಂಡದ ಯುವ ಆಟಗಾರರಿಗೆ ಮೆಂಟರ್ ಆಗಿ ನನ್ನ ಅನುಭವಗಳನ್ನು ಹಂಚಿಕೊಂಡಿದ್ದೇನೆ. ಇಲ್ಲಿ ಅಧಿಕಾರಕ್ಕಿಂತ ಎಲ್ಲರಿಗೂ ಭಾರತ ತಂಡಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇನೆ ಎಂದು ಟೆಸ್ಟ್ ಸ್ಪೆಷಲಿಸ್ಟ್ ಹೇಳಿದ್ದಾರೆ.
ಇದನ್ನೂ ಓದಿ: KL Rahul: ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಕೆ.ಎಲ್.ರಾಹುಲ್ ಔಟ್