ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಗೆದ್ದಿರುವ ಭಾರತ ತಂಡಕ್ಕೆ ಇದೀಗ ಏಕದಿನ ಸರಣಿ ಗೆಲ್ಲುವ ಸವಾಲು ಎದುರಾಗಿದೆ. ಇಂದು ಆಕ್ಲೆಂಡ್‌ನಲ್ಲಿ ಉಭಯ ತಂಡಗಳ ನಡುವೆ ಮೊದಲ ಪಂದ್ಯ ನಡೆಯುತ್ತಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಎದುರಾಳಿ ತಂಡಕ್ಕೆ 307 ರನ್ಗಳ ಬೃಹತ್ ಗುರಿ ನೀಡಿತು.
ಭಾರತದ ಇನ್ನಿಂಗ್ಸ್ ಹೀಗಿತ್ತು..: ಆರಂಭಿಕರಾದ, ನಾಯಕ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಕಿವೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಇಬ್ಬರು ಶತಕದ ಜೊತೆಯಾಟವಾಡಿ ತಂಡದ ಮೊತ್ತವನ್ನು ನಿಧಾನಗತಿಯಲ್ಲಿ ಏರಿಸುವಲ್ಲಿ ಸಫಲರಾದರು. ಅರ್ಧಶತಕ ಪೂರೈಸಿದ ಬೆನ್ನಲ್ಲೇ ಶುಭಮನ್ ಗಿಲ್ ಔಟಾಗಿ ಪೆವಿಲಿಯನ್ ಹಾದಿ ಹಿಡಿದರು. ಇವರ ಬಳಿಕ ಶಿಖರ್ ಧವನ್ 72 ರನ್ ಗಳಿಸಿ ಔಟಾದರು.
ಆರಂಭಿಕರು ಔಟಾದ ಬಳಿಕ ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಕಣಕ್ಕಿಳಿದರು. ಪಂತ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಬಳಿಕ ಬಂದ ಸೂರ್ಯಕುಮಾರ್ ಯಾದವ್ ಸಹ ಪಂತ್ ಹಾದಿಯನ್ನೇ ಹಿಡಿದರು. ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಉತ್ತಮ ಜೊತೆಯಾಟವಾಡಿ ಪಂದ್ಯದ ಮೊತ್ತ ಹೆಚ್ಚಿಸುವಲ್ಲಿ ಯಶಸ್ಸು ಸಾಧಿಸಿದರು.
ಸಂಜು ಸ್ಯಾಮ್ಸನ್ 36 ರನ್ಗಳನ್ನು ಪೇರಿಸಿ ಪೆವಿಲಿಯನ್ ಹಾದಿ ಹಿಡಿದರು. ಇವರ ಸ್ಥಾನಕ್ಕೆ ಬಂದ ವಾಷಿಂಗ್ಟನ್ ಸುಂದರ್ ಸ್ಫೋಟಕ ಆಟ ಪ್ರದರ್ಶಿಸಿದರು. 16 ಎಸೆತಗಳಲ್ಲಿ 37 ರನ್ಗಳನ್ನು ಗಳಿಸಿ ಅಜೇಯರಾಗುಳಿದರು. ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 306 ರನ್ಗಳನ್ನು ಕಲೆ ಹಾಕಿ ಎದುರಾಳಿಗೆ ಬೃಹತ್ ಗುರಿ ನೀಡಿದರು.
ಶಿಖರ್ ಧವನ್ 72, ಶುಭಮನ್ ಗಿಲ್ 50, ಶ್ರೇಯಸ್ ಅಯ್ಯರ್ 80, ರಿಷಭ್ ಪಂತ್ 15, ಸೂರ್ಯಕುಮಾರ್ ಯಾದವ್ 4, ಸಂಜು ಸ್ಯಾಮ್ಸನ್ 36, ಶಾರ್ದೂಲ್ ಠಾಕೂರ್ 1 ಮತ್ತು ವಾಷಿಂಗ್ಟನ್ ಸುಂದರ್ ಔಟಾಗದೇ 37 ರನ್ಗಳನ್ನು ಕಲೆ ಹಾಕಿದರು. ನ್ಯೂಜಿಲೆಂಡ್ ಪರ ಸೌಥಿ, ಲಾಕಿ ಫರ್ಗುಸನ್ ತಲಾ 3 ವಿಕೆಟ್ಗಳನ್ನು ಪಡೆದು ಮಿಂಚಿದ್ರೆ, ಆ್ಯಡಂ ಮಿಲ್ನೆ 1 ವಿಕೆಟ್ ಪಡೆದರು.
ಆಕ್ಲೆಂಡ್‌ನಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಒಮ್ಮೆ ಮಾತ್ರ 300+ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿದೆ. 2007ರಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 337 ರನ್ ಕಲೆ ಹಾಕಿತ್ತು. ಈ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ 48.4 ಓವರ್‌ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 340 ರನ್ಗಳನ್ನು ಪೇರಿಸಿ ರೋಚಕ ವಿಜಯ ಸಾಧಿಸಿತ್ತು.
ಪ್ರಸಕ್ತ ಸರಣಿಯಲ್ಲಿ ಹಿರಿಯ ಆಟಗಾರರು ಆಡುತ್ತಿಲ್ಲ. ಶಿಖರ್ ಧವನ್ ನಾಯಕತ್ವದಲ್ಲಿ ಯುವ ಟೀಂ ಇಂಡಿಯಾ ಮೈದಾನಕ್ಕಿಳಿದಿದೆ. ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ನಾಯಕತ್ವವನ್ನು ನಿರ್ವಹಿಸುತ್ತಿದ್ದಾರೆ. ಇನ್ನು, ಉಮ್ರಾನ್ ಮಲಿಕ್ ಮತ್ತು ಅರ್ಶ್‌ದೀಪ್ ಸಿಂಗ್ ಇಂದು ಭಾರತಕ್ಕೆ ಚೊಚ್ಚಲ ಏಕದಿನ ಪಂದ್ಯವನ್ನಾಡುತ್ತಿರುವುದು ಗಮನಾರ್ಹ.
ಇದನ್ನೂ ಓದಿ: ರೊನಾಲ್ಡೊ ದಾಖಲೆಯ ಆಟಕ್ಕೆ ಮಣಿದ ಘಾನಾ; ಸರ್ಬಿಯಾ ವಿರುದ್ಧ ಬ್ರೆಜಿಲ್‌ಗೆ ವಿಜಯ