ಬರ್ಮಿಂಗ್ ಹ್ಯಾಮ್(ಎಡ್ಜಬಾಸ್ಟನ್): ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನತ್ತ ದಾಪುಗಾಲು ಹಾಕಿದ್ದು, ಕೊನೆಯ ದಿನ ಚೇಸ್ ಮಾಡಿ, ಸುಲಭ ಗೆಲುವು ದಾಖಲು ಮಾಡುವ ಮುನ್ಸೂಚನೆ ನೀಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಆಂಗ್ಲರ ಪಡೆ, ಎರಡನೇ ಇನ್ನಿಂಗ್ಸ್ನಲ್ಲಿ ತಿರುಗಿಬಿದ್ದು ಉತ್ತಮ ಪ್ರದರ್ಶನ ನೀಡ್ತಿದ್ದು, ಭಾರತದ ಬೌಲರ್ಗಳ ಮೇಲೆ ಸವಾರಿ ನಡೆಸುತ್ತಿದೆ.
ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 245 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಎದುರಾಳಿ ತಂಡದ ಗೆಲುವಿಗೆ 378ರನ್ಗಳ ಗುರಿ ನೀಡಿದೆ. ಗುರಿ ಬೆನ್ನತ್ತಿರುವ ಬೆನ್ ಸ್ಟೋಕ್ಸ್ ಬಳಗ 50 ಓವರ್ಗಳಲ್ಲಿ 3 ವಿಕೆಟ್ನಷ್ಟಕ್ಕೆ 246 ರನ್ಗಳಿಕೆ ಮಾಡಿದ್ದು, ಇದೀಗ ಕೇವಲ 132ರನ್ಗಳಿಕೆ ಮಾಡುವುದು ಬಾಕಿ ಇದೆ. ಜೊತೆಗೆ ಕೈಯಲ್ಲಿ 7 ವಿಕೆಟ್ ಬಾಕಿ ಇದೆ. ಸದ್ಯ ಮೈದಾನದಲ್ಲಿ ಗಟ್ಟಿಯಾಗಿ ನಿಂತು, ರೂಟ್ ಹಾಗೂ ಬೈರ್ಸ್ಟೋ ಬ್ಯಾಟ್ ಮಾಡ್ತಿದ್ದು, ತಂಡಕ್ಕೆ ಗೆಲುವಿನ ಕಾಣಿಕೆ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿರಿ: ಬರ್ಮಿಂಗ್ಹ್ಯಾಮ್ ಟೆಸ್ಟ್: ಇಂಗ್ಲೆಂಡ್ ಗೆಲುವಿಗೆ 378ರನ್ ಟಾರ್ಗೆಟ್ ನೀಡಿದ ಭಾರತ
378 ರನ್ಗಳ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ನಲ್ಲಿ ಅದ್ಭುತವಾದ ಜೊತೆಯಾಟವಾಡ್ತಿದೆ. ಅರಂಭಿಕರಾಗಿ ಕಣಕ್ಕಿಳಿದ ಅಲೆಕ್ಸ್ ಹಾಗೂ ಜಾಕ್ ಜೋಡಿ ಮೊದಲ ವಿಕೆಟ್ಗೆ 107ರನ್ಗಳ ಜೊತೆಯಾಟವಾಡಿತು. ಈ ವೇಳೆ 46ರನ್ಗಳಿಕೆ ಮಾಡಿದ್ದ ಜಾಕ್ ವಿಕೆಟ್ ಪಡೆದುಕೊಳ್ಳುವಲ್ಲಿ ಬುಮ್ರಾ ಯಶಸ್ವಿಯಾದರು. ಇದರ ಬೆನ್ನಲ್ಲೇ ಬಂದ ಪೊಪೆ(0) ಸೊನ್ನೆಗೆ ಔಟಾದರು. 56ರನ್ಗಳಿಕೆ ಮಾಡಿ ಉತ್ತಮವಾಗಿ ಆಡ್ತಿದ್ದ ಅಲೆಕ್ಸ್ ಕೂಡ ರನೌಟ್ ಬಲೆಗೆ ಬಿದ್ದರು.
ರೂಟ್-ಬೈರ್ ಸ್ಟೋ ಉತ್ತಮ ಜೊತೆಯಾಟ: ಮಧ್ಯಮ ಕ್ರಮಾಂಕದಲ್ಲಿ ರೂಟ್ ಹಾಗೂ ಬೈರ್ ಸ್ಟೋ ಉತ್ತಮ ಜೊತೆಯಾಟವಾಡ್ತಿದ್ದು, 73ರನ್ಗಳಿಕೆ ಮಾಡಿರುವ ಮಾಜಿ ಕ್ಯಾಪ್ಟನ್ ರೂಟ್ ಹಾಗೂ 66ರನ್ಗಳಿಸಿರುವ ಬೈರ್ ಸ್ಟೋ ಮೈದಾನದಲ್ಲಿದ್ದಾರೆ.
ಪಂದ್ಯ ಮುಕ್ತಾಯಗೊಳ್ಳಲು ನಾಳೆ ಒಂದು ದಿನ ಬಾಕಿ ಇರುವ ಕಾರಣ, ಪಂದ್ಯ ಸಂಪೂರ್ಣವಾಗಿ ಇಂಗ್ಲೆಂಡ್ ಹಿಡಿತದಲ್ಲಿದೆ. ಟೀಂ ಇಂಡಿಯಾ ಮೇಲಿಂದ ಮೇಲೆ ವಿಕೆಟ್ ಪಡೆದುಕೊಳ್ಳದಿದ್ದರೆ ಇಂಗ್ಲೆಂಡ್ ಗೆಲುವಿನ ನಗೆ ಬೀರಲಿದೆ. ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಇತ್ತೀಚೆಗೆ ನ್ಯೂಜಿಲ್ಯಾಂಡ್ ವಿರುದ್ಧ ಮುಕ್ತಾಯಗೊಂಡ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ತಂಡ ಚೇಸಿಂಗ್ ಮಾಡಿ ಗೆಲುವು ದಾಖಲು ಮಾಡಿದೆ. ಈ ಪಂದ್ಯದಲ್ಲೂ ಚೇಸ್ ಮಾಡ್ತಿರುವ ಸ್ಟೋಕ್ಸ್ ಬಳಗ ಸದ್ಯ ಕಮಾಂಡೋ ಸ್ಥಿತಿಯಲ್ಲಿದೆ.