ನಾಗ್ಪುರ (ಮಹಾರಾಷ್ಟ್ರ): ಬಾರ್ಡರ್ - ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯವಾಗಿದೆ. ಮೊದಲ ಇನ್ಸಿಂಗ್ಸ್ನಲ್ಲಿ 177 ರನ್ಗಳಿಗೆ ಆಸ್ಟ್ರೇಲಿಯಾ ಆಲೌಟ್ ಆಗಿದೆ. ಭಾರತ ತಂಡ ಕೂಡ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ್ದು, ನಾಯಕ ರೋಹಿತ್ ಶರ್ಮಾ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 24 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 77 ರನ್ ಪೇರಿಸಿದೆ.
ಮಹಾರಾಷ್ಟ್ರದ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ದುಕೊಂಡಿತ್ತು. ಆದರೆ, ಭಾರತದ ಬೌಲರ್ಗಳ ದಾಳಿಗೆ ಆಸ್ಟ್ರೇಲಿಯಾದ ಬ್ಯಾಟರ್ಗಳು ತತ್ತರಿಸಿ ಹೋದರು. ಪರಿಣಾಮ ಮೊದಲ ಇನ್ಸಿಂಗ್ಸ್ನಲ್ಲಿ ಕೇವಲ 177 ರನ್ಗಳಿಗೆ ಸರ್ವಪತನ ಕಂಡಿತು.
ಮಧ್ಯಾಹ್ನದ ಟೀ ವಿರಾಮದ ನಂತರ ಮೊದಲ ಇನ್ನಿಂಗ್ಸ್ ಟೀಂ ಇಂಡಿಯಾದ ಪರವಾಗಿ ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆಎಲ್ ರಾಹುಲ್ ಆರಂಭಿಸಿ, ಮೊದಲ ವಿಕೆಟ್ಗೆ 76 ರನ್ಗಳ ಜೊತೆಯಾಟ ನೀಡಿದರು. 71 ಎಸೆತಗಳಲ್ಲಿ ಒಂದು ಬೌಂಡರಿ ಸಮೇತ 20 ರನ್ ಗಳಿಸಿದ್ದ ರಾಹುಲ್ ಟಾಡ್ ಮರ್ಫಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ, ನಾಯಕ ರೋಹಿತ್ ಬಿರುಸಿನಿಂದ ಬ್ಯಾಟ್ ಬೀಸಿ 9 ಬೌಂಡರಿಗಳು ಮತ್ತು 1 ಸಿಕ್ಸರ್ ಸಮೇತವಾಗಿ 69 ಎಸೆತಗಳಲ್ಲಿ 56 ರನ್ಗಳನ್ನು ಕಲೆ ಹಾಕಿದ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ರಾಹುಲ್ ಔಟಾದ ನಂತರ ಮೂರನೇ ಕ್ರಮದಲ್ಲಿ ಬಂದಿರುವ ರವಿಚಂದ್ರನ್ ಅಶ್ವಿನ್ ಕ್ರೀಸ್ನಲ್ಲಿದ್ದಾರೆ.
ಆಸ್ಟ್ರೇಲಿಯಾ ಇನ್ಸಿಂಗ್ಸ್: ಮೊದಲ ಬ್ಯಾಟಿಂಗ್ಗೆ ಇಳಿದಿದ್ದ ಆಸೀಸ್ ತಂಡಕ್ಕೆ ಭಾರತದ ಬೌಲರ್ಗಳು ಆರಂಭದಲ್ಲೇ ಶಾಕ್ ನೀಡಿದರು. ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಮತ್ತು ಉಸ್ಮಾನ್ ಖವಾಜಾ ತಂಡಕ್ಕೆ ಉತ್ತಮ ಅಡಿಪಾಯ ಹಾಕುವಲ್ಲಿ ಎಡವಿದರು. ಕೇವಲ 2 ರನ್ಗಳ ಗಳಿಸುವಷ್ಟರಲ್ಲೇ ವಾರ್ನರ್ (1) ಮತ್ತು ಉಸ್ಮಾನ್ (1) ಅವರ ಎರಡು ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಆಸೀಸ್ ಸಂಕಷ್ಟಕ್ಕೆ ಸಿಲುಕಿತು. ಎರಡನೇ ಓವರ್ನಲ್ಲಿ ಮೊಹಮ್ಮದ್ ಸಿರಾಜ್ ಎಸೆತಕ್ಕೆ ಉಸ್ಮಾನ್ ಖವಾಜಾ ಎಲ್ಬಿಡಬ್ಲ್ಯೂ ಬಲೆಗೆ ಸಿಲುಕಿದರು. ಮತ್ತೊಂದೆಡೆ, ಮೂರನೇ ಓವರ್ನ ಮೊದಲ ಎಸತೆದಲ್ಲೇ ಮೊಹಮ್ಮದ್ ಶಮಿ ಕೂಡ ವಾರ್ನರ್ ಅವರನ್ನು ಬೋಲ್ಡ್ ಮಾಡಿದರು.
ನಂತರ ಬಂದ ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಸ್ಟೀವನ್ ಸ್ಮಿತ್ ತಂಡಕ್ಕೆ ಆಸರೆಯಾದರು. ಇದರಿಂದ ಊಟದ ವಿರಾಮದ ವೇಳೆಗೆ ಪ್ಯಾಟ್ ಕಮಿನ್ಸ್ ಪಡೆ 32 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿತ್ತು. ಆದರೆ, ಇದರ ಬಳಿಕ ಮತ್ತೆ ಆಸೀಸ್ ಬೇಗನೇ ವಿಕೆಟ್ಗಳನ್ನು ಕಳೆದುಕೊಂಡಿತು. ಉತ್ತಮವಾಗಿ ಆಡುತ್ತಿದ್ದ ಲ್ಯಾಬುಸ್ಚಾಗ್ನೆ 49 ರನ್ಗಳಿಗೆ ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ಔಟ್ ಆಗಿ ಅರ್ಧಶತಕದಿಂದ ವಂಚಿತರಾದರು. ಅಲ್ಲದೇ, ಈ ಮೂಲಕ ಸ್ಟೀವನ್ ಸ್ಮಿತ್ ಮತ್ತು ಲ್ಯಾಬುಸ್ಚಾಗ್ನೆ 82 ರನ್ಗಳ ಜೊತೆಯಾಟ ಕೊನೆಯಾಯಿತು.
ಇದಾದ ಬೆನ್ನಲ್ಲೇ ಮ್ಯಾಟ್ ರೆನ್ಶಾ ಅವರನ್ನು ಶೂನ್ಯಕ್ಕೆ ಜಡೇಜಾ ಎಲ್ಬಿ ಬಲೆಗೆ ಕೆಡವಿದರು. ನಂತರ ಸ್ಟೀವನ್ ಸ್ಮಿತ್ ಜೊತೆಗೂಡಿದ ಪೀಟರ್ ಹ್ಯಾಂಡ್ಸ್ಕಾಂಬ್ ಕೊಂಚ ಉತ್ತಮವಾಗಿ ಬ್ಯಾಟ್ ಬೀಸುವ ಮುನ್ಸೂಚನೆ ನೀಡಿದರು. ಆದರೆ, ತಂಡದ ಮೊತ್ತ 109 ರನ್ಗಳಾಗಿದ್ದಾಗ 37 ರನ್ಗಳಿಸಿದ್ದ ಸ್ಮಿತ್ರನ್ನು ಜಡೇಜಾ ಪೆವಿಲಿಯನ್ಗೆ ಕಳುಹಿಸಿದರು. ಬಳಿಕ ಬಂದ ಅಲೆಕ್ಸ್ ಕ್ಯಾರಿ ಮತ್ತು ಪೀಟರ್ 52 ರನ್ಗಳು ಜೊತೆಯಾಟ ನೀಡಿದರು. ಈ ವೇಳೆ ಪೀಟರ್ (31) ಅವರನ್ನು ಜಡೇಜಾ ಎಲ್ಬಿ ಬಲೆಗೆ ಬೀಳಿಸಿದರೆ, ಅಲೆಕ್ಸ್ ಕ್ಯಾರಿ (36) ಅವರನ್ನು ಆರ್.ಅಶ್ವಿನ್ ಬೋಲ್ಡ್ ಮಾಡಿದರು. ನಂತರದಲ್ಲಿ ಬೇರೆ ಯಾರ ಆಟಗಾರರು ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಇದರಿಂದ 66.5 ಓವರ್ಗಳಲ್ಲಿ 177 ರನ್ಗಳಿಗೆ ಆಸೀಸ್ ತಂಡ ತನ್ನ ಮೊದಲ ಇನ್ನಿಂಗ್ಸ್ ಪೂರ್ಣಗೊಳಿಸಿತು.
ಜಡೇಜಾ ಭರ್ಜರಿ ಕಮ್ಬ್ಯಾಕ್: ಟೀಂ ಇಂಡಿಯಾ ಪರವಾಗಿ ಆರಂಭದಲ್ಲೇ ಸಿರಾಜ್ ಮತ್ತು ಶಮಿ ಆಸೀಸ್ ಆಟಗಾರರಿಗೆ ಶಾಕ್ ನೀಡಿದರೆ, ನಂತರದಲ್ಲಿ ಜಡೇಜಾ ಹಾಗೂ ಅಶ್ವಿನ್ ತಮ್ಮ ಸ್ಪೀನ್ ಮೋಡಿಯಿಂದ ಬ್ಯಾಟರ್ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಗಾಯದ ಕಾರಣದಿಂದ ಬಹಳ ದಿನಗಳ ನಂತರ ತಂಡಕ್ಕೆ ಮರಳಿದ ಜಡೇಡಾ ಐದು ವಿಕೆಟ್ಗಳನ್ನು ಪಡೆದು ಮುಂಚಿದರು. ಅಶ್ವಿನ್ ಮೂರು ವಿಕೆಟ್, ಸಿರಾಜ್ ಮತ್ತು ಶಮಿ ತಲಾ ಒಂದು ವಿಕೆಟ್ ಕಬಳಿಸಿದರು.
ಭಾರತ-ಆಸೀಸ್ ಟೆಸ್ಟ್ ಇತಿಹಾಸ: ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಇದುವರೆಗೆ ಒಟ್ಟು 102 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆಸ್ಟ್ರೇಲಿಯಾವು ಮೇಲುಗೈ ಹೊಂದಿದ್ದು, 43 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಟೀಂ ಇಂಡಿಯಾ 30 ಪಂದ್ಯಗಳನ್ನು ಗೆದ್ದಿದೆ. ಉಭಯ ತಂಡಗಳ ನಡುವೆ 28 ಪಂದ್ಯಗಳು ಡ್ರಾ ಆಗಿವೆ. ಒಂದು ಪಂದ್ಯ ಟೈ ಆಗಿದೆ. ಆದರೆ, ಭಾರತ ತಂಡ ತವರಿನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಭಾರತದ ನೆಲದಲ್ಲಿ ಎರಡು ತಂಡಗಳ ನಡುವೆ 50 ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ 21 ಪಂದ್ಯಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ 13 ಪಂದ್ಯಗಳನ್ನು ಮಾತ್ರ ಗೆದ್ದಿದೆ. 15 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದರೆ, ಒಂದು ಪಂದ್ಯ ಟೈ ಆಗಿದೆ.
ತಂಡಗಳು - ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಸೂರ್ಯಕುಮಾರ್ ಯಾದವ್, ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ ಜಡೇಜಾ, ಆರ್.ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವನ್ ಸ್ಮಿತ್ (ಉಪನಾಯಕ), ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಮ್ಯಾಟ್ ರೆನ್ಶಾ, ಪೀಟರ್ ಹ್ಯಾಂಡ್ಸ್ಕಾಂಬ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ನಾಥನ್ ಲಿಯಾನ್, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್.
ಇದನ್ನೂ ಓದಿ: ಸೂರ್ಯಕುಮಾರ್ ಯಾದವ್, ಕೆಎಸ್ ಭರತ್ ಟೆಸ್ಟ್ ಕ್ರಿಕೆಟ್ ಪದಾರ್ಪಣೆ: ಕ್ಯಾಪ್ ಹಸ್ತಾಂತರಿಸಿದ ರವಿ ಶಾಸ್ತ್ರಿ