ಹೈದರಾಬಾದ್ (ತೆಲಂಗಾಣ): ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಆಟ ಮತ್ತು ನಾಯಕತ್ವವನ್ನು ಅತ್ಯುತ್ತಮವಾಗಿ ನಿಭಾಯಿಸುತ್ತಿದ್ದಾರೆ. ಪ್ರಸಕ್ತ ಕಾಲಘಟ್ಟದಲ್ಲಿ ವಿರಾಟ್ ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರ ಎಂದು ಭಾರತದ ಲೆಜೆಂಡ್ ಆಟಗಾರ ಗುಂಡಪ್ಪ ವಿಶ್ವನಾಥ್ ಹೇಳಿದ್ದಾರೆ.
ಭಾರತ ತಂಡಕ್ಕೆ 1969 ರಿಂದ 1983ರ ಸಮಯದಲ್ಲಿ 91 ಟೆಸ್ಟ್ ಪಂದ್ಯಗಳನ್ನು ಆಡಿರುವ ಗುಂಡಪ್ಪ ರಂಗನಾಥ್ ವಿಶ್ವನಾಥ್ 6,080 ರನ್ ಕಲೆಹಾಕಿದ್ದಾರೆ. ಇವರು ನಾಳೆ ನಡೆಯಲಿರುವ ವಿಶ್ವಕಪ್ ಫೈನಲ್ ಹಣಾಹಣಿಯ ಬಗ್ಗೆ ಈಟಿವಿ ಭಾರತದ ಜೊತೆಗೆ ಹಂಚಿಕೊಂಡ ಎಕ್ಸ್ಕ್ಲ್ಯೂಸಿವ್ ಮಾಹಿತಿ ಇಲ್ಲಿದೆ.
2023ರ ವಿಶ್ವಕಪ್ನಲ್ಲಿ ಭಾರತ ತಂಡ ಆಟದ ಬಗ್ಗೆ ಮಾತನಾಡಿದ ವಿಶ್ವನಾಥ್, "ನಾ ಕಂಡಂತೆ ವಿಶ್ವಕಪ್ ಇತಿಹಾಸದಲ್ಲಿ ಇಷ್ಟು ಸ್ಥಿರ ಪ್ರದರ್ಶನ ಯಾವುದೇ ತಂಡದಿಂದ ಬಂದಿಲ್ಲ. 1975, 1979ರ ವಿಶ್ವಕಪ್ ಕಾಲದಲ್ಲೂ ದಿಗ್ಗಜ ಅಟಗಾರರಿದ್ದ ವೆಸ್ಟ್ ಇಂಡೀಸ್ ತಂಡ ಸೋಲು ಕಂಡಿತ್ತು, ಭಾರತ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಅದು ಕೇವಲ ಒಂದು ವಿಭಾಗದಲ್ಲಿ ಅಲ್ಲ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲೂ ಬಲಿಷ್ಠ ತಂಡವಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
1975 ಮತ್ತು 1979ರ ವಿಶ್ವಕಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ದಿಗ್ಗಜ ಗುಂಡಪ್ಪ ಅವರು ಆ ಕಾಲದಲ್ಲಿ ಭಾರತ ತಂಡದ ಪ್ರದರ್ಶನವನ್ನು ನೆನೆದರು. ಅಲ್ಲದೇ ಈಗ ನಡೆಯುತ್ತಿರುವ ದೇಶಿಯ ಕ್ರಿಕೆಟ್ ಅಂತಾರಾಷ್ಟ್ರೀಯ ತಂಡದ ಬಲ ಎಂದರು. "ನನಗೆ ಸರಿಯಾಗಿ ನೆನಪಾಗುತ್ತಿಲ್ಲ 1970-80ರ ಕಾಲಘಟ್ಟದಲ್ಲಿ ನಮ್ಮಲ್ಲಿ ಒಂದು ದೇಶಿಯ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಆದರೆ ಈಗ ವರ್ಷ ಪೂರ್ತಿ ಉತ್ತಮ ಗುಣಮಟ್ಟದ ದೇಶೀಯ ಪಂದ್ಯಗಳು ನಡೆಯುತ್ತಿರುವುದು ಅಂತಾರಾಷ್ಟ್ರೀಯ ತಂಡದ ಉತ್ತಮ ಪ್ರದರ್ಶನಕ್ಕೆ ಕಾರಣ" ಎಂದು ಹೇಳಿದರು.
ವಿರಾಟ್ ಮತ್ತು ಸಚಿನ್ ಅವರನ್ನು ಹೋಲಿಕೆ ಮಾಡಲ್ಲ: 25 ಏಕದಿನ ಪಂದ್ಯದಲ್ಲಿ ಭಾರತಕ್ಕೆ ಆಡಿರುವ ಗುಂಡಪ್ಪ ವಿಶ್ವನಾಥ್ ಅವರು 439 ರನ್ ಕಲೆಹಾಕಿದ್ದಾರೆ. ವಿಶ್ವಕಪ್ನಲ್ಲಿ ವಿರಾಟ್ ಪ್ರದರ್ಶನದ ಬಗ್ಗೆ ಮಾತನಾಡಿ, "ಒಂದು ಮಾದರಿಯ ಕ್ರಿಕೆಟ್ನಲ್ಲಿ 50 ಶತಕ ಗಳಿಸುವುದು ಎಂದರೆ ಸಣ್ಣ ಮಾತಲ್ಲ. ತಂಡಕ್ಕೆ ಸೇರ್ಪಡೆ ಆದಾಗಿನಿಂದ ಒಂದೇ ರೀತಿಯ ಸ್ಥಿರತೆ ಕಾಪಾಡಿಕೊಂಡು ಬಂದಿದ್ದಾರೆ. ಸಚಿನ್ ದಾಖಲೆ ಮುರಿದು ಮುಂದೆ ಹೋಗಿದ್ದಾರೆ. ಇಬ್ಬರನ್ನು ನಾನು ಹೋಲಿಕೆ ಮಾಡಲ್ಲ. ಆದರೆ ಅವರ ದಾಖಲೆ ಮೀರಿಸುವುದು ಸುಲಭದ ಮಾತಲ್ಲ. ಮುಂದೆ ವಿರಾಟ್ ಇನ್ನಷ್ಟು ರನ್ ಮಾಡ್ತಾರೆ. ಅವರ ಫಿಟ್ನೆಸ್ ಕಾರಣದಿಂದ ಇನ್ನೂ ತುಂಬಾ ವರ್ಷ ಕ್ರಿಕೆಟ್ ಆಡ್ತಾರೆ. ವಿರಾಟ್ ಎಲ್ಲಾ ದೇಶದಲ್ಲಿ, ಎಲ್ಲಾ ತಂಡದ ವಿರುದ್ಧ, ನಾನಾ ಕಂಡೀಷನ್ನಲ್ಲಿ ಆಡಿದ್ದಾರೆ. ಹೀಗಾಗಿ ಅವರೊಬ್ಬ ಈ ಕಾಲಘಟ್ಟದ ಶ್ರೇಷ್ಠ ಆಟಗಾರ" ಎಂದು ಬಣ್ಣಿಸಿದ್ದಾರೆ.
ಎಲ್ಲಾ ವಿಭಾಗದಲ್ಲೂ ತಂಡ ಬಲಿಷ್ಠವಾಗಿದೆ: ವಿಶ್ವಕಪ್ ನಿಮ್ಮ ನೆಚ್ಚಿನ ಆಟಗಾರ ಯಾರು ಎಂಬ ಪ್ರಶ್ನೆಗೆ, "ಈ ವಿಶ್ವಕಪ್ನಲ್ಲಿ ಎಲ್ಲರೂ ಚೆನ್ನಾಗಿ ಆಡುತ್ತಿದ್ದಾರೆ. ಆರಂಭಿಕರಾದ ರೋಹಿತ್ ಶರ್ಮಾ, ಶುಭಮನ್ ಗಿಲ್ ಚುರುಕಾದ ಆರಂಭದ ತಂದುಕೊಟ್ಟರೆ, ನಂತರ ವಿರಾಟ್, ಶ್ರೇಯಸ್ ಜೊತೆಯಾಟ ಬೆಳೆಸಿದ್ದಾರೆ. ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಶಿಸ್ತಿನಿಂದ ತಮ್ಮ ಕೆಲಸ ಮಾಡುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ಗೆ ಯಾವುದೇ ಪಂದ್ಯದಲ್ಲಿ ಸರಿಯಾಗಿ ಸಾಮರ್ಥ್ಯ ಸಾಬೀತು ಮಾಡಲು ಅವಕಾಶ ಸಿಕ್ಕಿಲ್ಲ. ಅವರು ಆರನೇ ಆಟಗಾರನಾಗಿ ಬರುತ್ತಿರುವುದರಿಂದ ಅವಕಾಶ ಕಡಿಮೆ ಇದೆ. ಬೌಲಿಂಗ್ ವಿಭಾಗದಲ್ಲಿ ಬುಮ್ರಾ, ಸಿರಾಜ್, ಶಮಿ ಉತ್ತಮ ನಿರ್ವಹಣೆ ಮಾಡುತ್ತಿದ್ದಾರೆ, ಅವರಿಗೆ ಕುಲ್ದೀಪ್, ಜಡೇಜಾ ಮಧ್ಯಮ ಓವರ್ಗಳಲ್ಲಿ ಸಾಥ್ ನೀಡುತ್ತಿದ್ದಾರೆ. ಒಟ್ಟಾರೆ ತಂಡವಾಗಿ ಉತ್ತಮವಾಗಿದೆ."
"ಅದರಲ್ಲೂ ರೋಹಿತ್ ಶರ್ಮಾ ಆಟ ಹೆಚ್ಚು ಇಷ್ಟ ಆಯ್ತು. ಮೊದಲ ಓವರ್ನಿಂದಲೇ ಎದುರಾಳಿಗಳನ್ನು ದಂಡಿಸುತ್ತಾರೆ. ಬೌಲರ್ ಯಾರೆಂದು ನೋಡದೇ ಬ್ಯಾಟ್ ಬೀಸುತ್ತಾರೆ. ಅವರ ನಾಯಕತ್ವವೂ ಉತ್ತಮವಾಗಿದೆ" ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬೌಲಿಂಗ್ ಸುಧಾರಿಸಿದೆ: ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ಕಂಡು ಬರುತ್ತಿದೆ ಎಂದಿದ್ದಾರೆ. "ಕಪಿಲ್ ದೇವ್ ಕಾಲದ ನಂತರ ಟೀಮ್ ಇಂಡಿಯಾದಲ್ಲಿ ವೇಗದ ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ಕಂಡು ಬಂತು. ಅದಕ್ಕೂ ಮುನ್ನ ನಾಲ್ಕು ಓವರ್ ನಂತರ ಸ್ಪಿನ್ನರ್ಗಳು ಆಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಗಂಟೆ 150ಕೀ.ಮೀ. ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್ ಇದ್ದಾರೆ. 1970-90ರ ಕಾಲಘಟ್ಟದಲ್ಲಿ ವೆಸ್ಟ್ ಇಂಡೀಸ್ ಬೌಲಿಂಗ್ನಷ್ಟೇ ಬಲಿಷ್ಠವಾಗಿದೆ. ಈಗ ಭಾರತವೂ ಆ ಸ್ಟ್ಯಾಂಡರ್ಡ್ ಸೆಟ್ ಮಾಡುತ್ತಿದೆ" ಎಂದಿದ್ದಾರೆ.
ಆಸಿಸ್ಗೆ ಅವಕಾಶ ಕೊಡಬಾರದು: "ಅಜೇಯವಾಗಿ ಫೈನಲ್ ಪ್ರವೇಶಿಸಿರುವ ಭಾರತವೇ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ. ಆದರೆ ಐದು ಬಾರಿ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾವನ್ನು ಕಡೆಗಣಿಸುವಂತಿಲ್ಲ. ನಾನು ಆಡಲು ಆರಂಭಿಸಿದಾಗಿನಿಂದ ಗಮನಿಸುತ್ತಿರುವ ವಿಷಯ ಎಂದರೆ, ಒಂದು ಸಣ್ಣ ಅವಕಾಶ ಸಿಕ್ಕರೆ ಅದನ್ನೇ ಗೆಲುವಿನ ತಂತ್ರವಾಗಿಸುವುದು. ಮ್ಯಾಕ್ಸ್ವೆಲ್ ಇನ್ನಿಂಗ್ಸ್ ಮತ್ತು ಸೆಮೀಸ್ ಪಂದ್ಯದಲ್ಲಿ ಆಡಿರುವುದು ಇದಕ್ಕೆ ಸಾಕ್ಷಿ. ತಂಡದ ನಾಯಕ ಯಾರೇ ಆದರು ಆ ಗುಣ ಆಟಗಾರರಲ್ಲಿ ಬರುತ್ತದೆ. ಆ ಅವಕಾಶ ಮಾಡಿಕೊಡದಂತೆ ಆಡಬೇಕು" ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ವಿಶ್ವಕಪ್ 2023ರ ಫೈನಲ್ ಪಂದ್ಯ: ಆಸ್ಟ್ರೇಲಿಯಾ ಮಣಿಸಲು ಸಜ್ಜಾದ ರೋಹಿತ್ ಶರ್ಮಾ ಅಂಡ್ ಟೀಂ