ಮುಂಬೈ(ಮಹಾರಾಷ್ಟ್ರ): 2023ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಫೈನಲ್ ತಲುಪಿದೆ. ಲೀಗ್ ಹಂತದಲ್ಲಿ ಸತತ ಗೆಲುವಿನೊಂದಿಗೆ ಸೆಮೀಸ್ಗೆ ಲಗ್ಗೆ ಇಟ್ಟಿರುವ ತಂಡದ ಅಜೇಯ ಓಟ ಮುಂದುವರಿದಿದೆ. ನಿನ್ನೆ ನಡೆದ ಮೊದಲ ಸೆಮೀಸ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿ ಇದೀಗ ಪ್ರಶಸ್ತಿ ಸುತ್ತಿನ ಹೋರಾಟಕ್ಕೆ ಸಿದ್ಧರಾಗಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 397 ರನ್ ಗಳಿಸಿದ್ದರೂ ಕೂಡ ಒಂದು ಹಂತದಲ್ಲಿ ಕಿವೀಸ್ ಗುರಿ ಭೇದಿಸುವತ್ತ ಸಾಗಿತ್ತು. ಈ ಬೆಳವಣಿಗೆ ಭಾರತೀಯ ಅಭಿಮಾನಿಗಳಲ್ಲಿ ಕೊಂಚ ಆತಂಕ ಉಂಟುಮಾಡಿತ್ತು. ಆದರೆ, ಬೌಲರ್‌ಗಳು ಅಬ್ಬರಿಸಿ ಕಿವೀಸ್ ತಂಡವನ್ನು 70 ರನ್‌ಗಳಿಂದ ಮಣಿಸುವಲ್ಲಿ ಯಶಸ್ಸು ಸಾಧಿಸಿದರು.
"ವಾಂಖೆಡೆ ಮೈದಾನದಲ್ಲಿ ಬಹಳಷ್ಟು ಪಂದ್ಯಗಳನ್ನು ಆಡಿದ್ದೇನೆ. ಹಾಗಂತ ನಾವು ರಿಲ್ಯಾಕ್ಸ್ ಆಗಬಾರದು. ಸೆಮೀಸ್‌ನಂತಹ ಪಂದ್ಯಗಳಲ್ಲಿ ಒತ್ತಡ ಸಹಜವೇ. ಯಾವಾಗ ಟಾರ್ಗೆಟ್ ರನ್‌ರೇಟ್ 9ಕ್ಕಿಂತ ಹೆಚ್ಚಿರುತ್ತದೋ, ಆಗ ಗೆಲ್ಲುವ ಅವಕಾಶ ಹೆಚ್ಚಿರುತ್ತದೆ. ಡೆರಿಲ್ ಮಿಚೆಲ್ ಮತ್ತು ಕೇನ್ ವಿಲಿಯಮ್ಸನ್ ಅದ್ಭುತವಾಗಿ ಆಡಿದರು. ಶಮಿ ಉತ್ತಮ ಬೌಲಿಂಗ್ ಮಾಡಿದರು. ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ" ಎಂದು ರೋಹಿತ್ ಶರ್ಮಾ ಹೇಳಿದರು.
"ಅಗ್ರ 6 ಆಟಗಾರರು ಬ್ಯಾಟಿಂಗ್‌ನಲ್ಲಿ ಮಿಂಚುತ್ತಿರುವುದು ನನಗೆ ಹೆಚ್ಚು ಖುಷಿ ತಂದಿದೆ. ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ಅತ್ಯುತ್ತಮ ಫಾರ್ಮ್ ಮುಂದುವರೆಸಿದ್ದಾರೆ. ಕೊಹ್ಲಿ ತಮ್ಮ ಟ್ರೇಡ್‌ಮಾರ್ಕ್ ಶಾಟ್‌ಗಳ ಮೂಲಕ ಹೊಸ ಮೈಲಿಗಲ್ಲು ತಲುಪಿದರು. ನಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳು ಅದ್ಭುತವಾಗಿವೆ. ಈ ಉತ್ಸಾಹದಿಂದಲೇ ಟೈಟಲ್ ಫೈಟ್ಗೆ ಎಂಟ್ರಿ ಕೊಡುತ್ತೇವೆ. ಇಂಗ್ಲೆಂಡ್ ವಿರುದ್ಧ ನಾವು 230 ರನ್‌ಗಳನ್ನು ಗಳಿಸಿದರೂ ಸಹ ನಮ್ಮ ಬೌಲರ್‌ಗಳು ಕಾಪಾಡಿದರು. ಮುಂದಿನ ತಂಡಗಳ ವಿರುದ್ಧವೂ ಗೆಲಿಸಿದರು. ಇಂದಿನ ಪಂದ್ಯದಲ್ಲಿ ಸುಮಾರು 400 ರನ್ ಬಾರಿಸಿದರೂ ಒತ್ತಡವಿರಲಿಲ್ಲ ಎಂದು ಹೇಳಲಾರೆ. ಆದರೆ, ನಮ್ಮ ಆಟಗಾರರ ಪ್ರದರ್ಶನದಿಂದ ಗೆಲುವು ಖಚಿತವಾಯಿತು. ಲೀಗ್ ಹಂತದಲ್ಲಿ 9 ಪಂದ್ಯಗಳಲ್ಲಿ ನಾವೇನು ಮಾಡಿದ್ದೇವೋ ಅದನ್ನೇ ಮುಂದುವರಿಸಿದ್ದೇವೆ" ಎಂದು ಶರ್ಮಾ ವಿವರಿಸಿದರು.
ಇದನ್ನೂ ಓದಿ: 'ನಿಜವಾಗಿಯೂ ನೀವು ದೇವರ ಮಗು': ಪತಿ ವಿರಾಟ್ ಕೊಹ್ಲಿಯನ್ನು ಮನಸಾರೆ ಹೊಗಳಿದ ಅನುಷ್ಕಾ ಶರ್ಮಾ