ಪುಣೆ (ಮಹಾರಾಷ್ಟ್ರ): ಇದುವರೆಗೆ ಆಡಿದ 7 ಪಂದ್ಯಗಳ ಪೈಕಿ ಸತತ 4 ಜಯ ಸಾಧಿಸಿ, ನಂತರ ಹ್ಯಾಟ್ರಿಕ್ ಸೋಲು ಕಂಡಿರುವ ನ್ಯೂಜಿಲೆಂಡ್‌ಗೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಸ್ಟಾರ್ ಬೌಲರ್ ಮ್ಯಾಟ್ ಹೆನ್ರಿ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಬುಧವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರು ಗಾಯಗೊಂಡಿದ್ದರು. ಓವರ್‌ನ ಮಧ್ಯದಲ್ಲೇ ಅವರು ಮೈದಾನ ಬಿಟ್ಟು ಹೊರ ನಡೆಯಬೇಕಾಯಿತು. ತಂಡದ ಯಶಸ್ಸಿಗೆ ಹೆನ್ರಿ ಗಾಯದ ನಡುವೆಯೂ ಮತ್ತೆ ಬ್ಯಾಟಿಂಗ್‌ಗೆ ಮರಳಿದ್ದರು. ಈ ಹಂತದಲ್ಲಿ ಗಾಯದ ನೋವು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಹೆನ್ರಿ ಅವರ ಗಾಯದ ತೀವ್ರತೆಯ ಬಗ್ಗೆ ಅಧಿಕೃತ ಸ್ಪಷ್ಟೀಕರಣವಿಲ್ಲದಿದ್ದರೂ, ಮುಂದಿನ ಒಂದೆರಡು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ.
ತಂಡಕ್ಕೆ ಏಟಿನ ಮೇಲೆ ಏಟು: ಅಕ್ಟೋಬರ್ 5ರಂದು ಆರಂಭವಾದ ವಿಶ್ವಕಪ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಆ ಬಳಿಕ ಕಿವೀಸ್ ತಂಡ ಸತತ ನಾಲ್ಕು ಗೆಲುವುಗಳನ್ನು ತಮ್ಮ ಖಾತೆಯಲ್ಲಿ ಹಾಕಿಕೊಂಡಿದೆ. ಇದರೊಂದಿಗೆ ಸೆಮಿಫೈನಲ್ ಗ್ಯಾರಂಟಿ ಎಂಬಂತೆ ಕಾಣಿಸಿಕೊಂಡಿದ್ದ ನ್ಯೂಜಿಲೆಂಡ್ ತೀವ್ರ ಹಿನ್ನಡೆ ಅನುಭವಿಸಿತು.
ನಾಲ್ಕು ಸತತ ಗೆಲುವಿನ ಬಳಿಕ ನ್ಯೂಜಿಲೆಂಡ್, ಭಾರತದ ವಿರುದ್ಧ ಸೋಲುಂಡಿತು. ಆಗಿನಿಂದಲೂ ತಂಡ ಲಯಕ್ಕೆ ಮರಳಲು ಕಷ್ಟಪಡುತ್ತಿದೆ. ಸತತ ಮೂರೂ ಪಂದ್ಯಗಳಲ್ಲಿ ಸೋಲನ್ನಪ್ಪಿರುವ ಕಿವೀಸ್ಗೆ ಸೆಮೀಸ್‌ಗೆ ತಲುಪುವ ಅವಕಾಶ ಇನ್ನಷ್ಟು ಜಟಿಲವಾಗಿದೆ. ಪ್ರಮುಖ ಆಟಗಾರರಾದ ಕೇನ್ ವಿಲಿಯಮ್ಸನ್, ಲಾಕಿ ಫರ್ಗುಸನ್ ಮತ್ತು ಮಾರ್ಕ್ ಚಾಪ್‌ಮನ್ ಗಾಯಗಳಿಂದಾಗಿ ವಿಶ್ವಕಪ್ ತಂಡದಲ್ಲಿಲ್ಲ. ಪ್ರಸ್ತುತ ಸ್ಟಾರ್ ಬೌಲರ್ ಆಗಿರುವ ಮ್ಯಾಟ್ ಹೆನ್ರಿ ಕೂಡಾ ಗಾಯಗೊಂಡಿರುವುದು ನ್ಯೂಜಿಲೆಂಡ್‌ಗೆ ದೊಡ್ಡ ಹೊಡೆತ ನೀಡಿದಂತಾಗಿದೆ.
ನೀಶಮ್‌ಗೂ ಗಾಯ?: ಮತ್ತೊಂದೆಡೆ, ಇದೇ ಪಂದ್ಯದಲ್ಲಿ ಹೆನ್ರಿ ಜೊತೆಗೆ ಜಿಮ್ಮಿ ನೀಶಮ್ ಕೂಡ ಗಾಯಗೊಂಡಿದ್ದಾರೆ ಎಂಬ ವರದಿಗಳಿವೆ. ಅವರ ಬಲ ಮಣಿಕಟ್ಟಿಗೆ ಗಾಯವಾಗಿದೆ ಎಂದು ವರದಿಯಾಗಿದೆ. ಇದು ನಿಜವಾಗಿದ್ದರೆ ಮುಂದಿನ ಪಂದ್ಯಗಳಿಗೆ ಅವರು ಲಭ್ಯರಿರುವುದಿಲ್ಲ. ಇದೇ ವೇಳೆ ಕಿವೀಸ್‌ನ ಸೆಮೀಸ್ ರೇಸ್ ಮತ್ತಷ್ಟು ಕಷ್ಟವಾಗಬಹುದು. ಬುಧವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ 190 ರನ್‌ಗಳ ಬೃಹತ್ ಅಂತರದಿಂದ ಹೀನಾಯ ಸೋಲು ಕಂಡಿತ್ತು.
ಇದನ್ನೂ ಓದಿ: ಅಯ್ಯರ್, ಸಿರಾಜ್ಗೆ ಕೊಕ್?: ಸಿಂಹಳೀಯರ ವಿರುದ್ಧ ಏಳನೇ ಜಯಕ್ಕೆ ಟೀಂ ಇಂಡಿಯಾ ಪ್ಲಾನ್ ಏನು?