ಸೌತಾಂಪ್ಟನ್ : ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಅವರಲ್ಲಿರುವ ಆತ್ಮವಿಶ್ವಾಸ ಅವರು ಉನ್ನತ ಮಟ್ಟದಲ್ಲಿ ಇಷ್ಟಪಟ್ಟಂತೆ ಆಡುವುದಕ್ಕೆ ನೆರವಾಗುತ್ತಿದೆ ಎಂದು ಮಾಜಿ ನ್ಯೂಜಿಲ್ಯಾಂಡ್ ಕೋಚ್ ಮತ್ತು ಆರ್ಸಿಬಿ ಕ್ರಿಕೆಟ್ ಕಾರ್ಯಾಚಾರಣೆಗಳ ನಿರ್ದೇಶಕ ಮೈಕ್ ಹೆಸನ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಪಂತ್ WTC ಫೈನಲ್ನಲ್ಲಿ 6ನೇ ಕ್ರಮಾಂಕದಲ್ಲಿ ಆಡಿದರೆ ಗುರುತುಳಿಯುವ ಪ್ರದರ್ಶನ ತೋರಬಹುದು ಎಂದಿದ್ದಾರೆ.
ರಿಷಭ್ ಪಂತ್ 2020ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ ತಂಡದ ಹನ್ನೊಂದರ ಬಳಗದಲ್ಲಿ ಸ್ಥಾನ ಕಳೆದುಕೊಂಡು 2ನೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದರು. ಆದರೆ, ಭಾರತ ಮೊದಲ ಟೆಸ್ಟ್ನಲ್ಲಿ 36 ರನ್ಗಳಿಗೆ ಆಲೌಟ್ ಆಗಿ ಹೀನಾಯ ಸೋಲುಂಡ ಬೆನ್ನಲ್ಲೇ 2ನೇ ಟೆಸ್ಟ್ನಲ್ಲಿ ಆಡುವ ಅವಕಾಶ ಪಡೆದು ಮಿಂಚಿದರು. ಸಿಡ್ನಿ ಟೆಸ್ಟ್ನಲ್ಲಿ ಆಕರ್ಷಕ 97 ರನ್ಗಳಿಸಿ ಸೋಲುವ ಪಂದ್ಯವನ್ನು ಡ್ರಾ ಸಾಧಿಸಲು ನೆರವಾಗಿದ್ದ ಅವರು, ಕೊನೆಯ ಗಬ್ಬಾಟೆಸ್ಟ್ನಲ್ಲಿ ಅಜೇಯ 89 ರನ್ಗಳಿಸಿ ಐತಿಹಾಸಿ ಟೆಸ್ಟ್ ಸರಣಿ ಗೆಲ್ಲಲು ನೆರವಾಗಿದ್ದರು.
ಅದೇ ಬ್ಯಾಟಿಂಗ್ ಪ್ರದರ್ಶನವನ್ನು ಇಂಗ್ಲೆಂಡ್ ವಿರುದ್ಧವೂ ತೋರಿಸಿದ ಅವರು, ಜೇಮ್ಸ್ ಆ್ಯಂಡರ್ಸನ್‌ರಂತಹ ಅನುಭವಿ ಬೌಲರ್ಗಳ ವಿರುದ್ಧ ಆಕರ್ಷಕ ಹೊಡೆತಗಳನ್ನು ಬಾರಿಸಿ ಕ್ರಿಕೆಟ್ ಜಗತ್ತನ್ನೇ ನಿಬ್ಬೆರಗಾಗಿಸಿದ್ದರು. ಜೋಫ್ರಾ ಆರ್ಚರ್ರಂತಹ ಮಾರಕ ವೇಗಿಗೆ ರಿವರ್ಸ್ ಸ್ವೀಪ್ ಮೂಲಕ ಸಿಕ್ಸರ್ಗಟ್ಟಿದ್ದನ್ನು ಭಾರತೀಯ ಅಭಿಮಾನಿಗಳು ಎಂದಿಗೂ ಮರೆಯುವಂತಿಲ್ಲ ಇದಕ್ಕೆಲ್ಲಾ ಕಾರಣ ಅವರಲ್ಲಿರುವ ಆತ್ಮವಿಶ್ವಾಸ ಎಂದು ಹೆಸನ್ ಹೇಳಿದ್ದಾರೆ.
"ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದಾರೆ, ಈಗ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹೆಚ್ಚು ನೆಲೆ ಕಂಡುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದಲೇ ಆತ ತಾನಾಡಲು ಬಯಸುವ ರೀತಿಯಲ್ಲಿ ಆಡುವುದಕ್ಕೆ ಸಮರ್ಥನಾಗಿದ್ದಾನೆ. ಅವನು ತನ್ನ ತಂಡದೊಳಗೆ ಸಾಕಷ್ಟು ನಂಬಿಕೆ ಗಳಿಸಿದ್ದಾನೆ" ಎಂದು ಹೆಸನ್ ಪಿಟಿಐಗೆ ತಿಳಿಸಿದ್ದಾರೆ. ಅವರು ಮೊದಲು ಕಠಿಣ ಪರಿಶ್ರಮದಿಂದ ಆಡುತ್ತಾರೆ, ಅವರು ತಾವಾಗಿಯೇ ತಮ್ಮಲ್ಲಿರುವ ಸಹಜ ಶಕ್ತಿಯನ್ನು ತೋರಿಸಲು ಬಯಸುತ್ತಾರೆ. ಇದನ್ನು ನೋಡಿ ನಾವು ಆನಂದಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ:ಟೆಸ್ಟ್ ರ‍್ಯಾಂಕಿಂಗ್.. ಟಾಪ್ 10ರಲ್ಲಿ ಕೊಹ್ಲಿ ಸೇರಿ 3 ಭಾರತೀಯರು, ಬೌಲಿಂಗ್ನಲ್ಲಿ ಅಶ್ವಿನ್ ಬೆಸ್ಟ್..