ಅಹಮದಾಬಾದ್: ಸೀಮಿತ ಓವರ್‌ಗಳ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡುತ್ತಿರುವುದಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕಡಿವಾಣ ಹಾಕಿದೆ. ಅಹಮದಾಬಾದ್‌ನಲ್ಲಿ ಮಂಗಳವಾರ ನಡೆದ ಮಹತ್ವದ ಸಭೆಯಲ್ಲಿ ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ ಓವರ್‌ಗಳ ಮಧ್ಯೆ ಕಾಲಮಿತಿ ಅಳವಡಿಸಲು ಐಸಿಸಿ ಕಠಿಣ ತೀರ್ಮಾನ ಕೈಗೊಂಡಿತು. ಈ ತೀರ್ಮಾನಕ್ಕೆ ಕ್ರಿಕೆಟ್ ವಲಯದಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ.
2023ರ ಡಿಸೆಂಬರ್ ತಿಂಗಳಿಂದ ಮುಂದಿನ ವರ್ಷ 2024ರ ಮಾರ್ಚ್ವರೆಗೆ ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ ಪ್ರಾಯೋಗಿಕವಾಗಿ ಸ್ಟಾಪ್ ಕ್ಲಾಕ್ ಬಳಕೆ ಮಾಡಲಾಗುತ್ತಿದೆ. ಅಂದರೆ ಇನ್ನಿಂಗ್‌ವೊಂದರಲ್ಲಿ ಪ್ರತಿ ಓವರ್ ಮುಕ್ತಾಯವಾದ ನಂತರ ತಕ್ಷಣ ಬೌಲಿಂಗ್ ಬದಲಾವಣೆ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ತಂಡದ ನಾಯಕ 60 ಸೆಕೆಂಡ್ಗಳಲ್ಲಿ ಮುಂದಿನ ಓವರ್ ಮಾಡಿಸಲು ಬೌಲರ್ ಆಯ್ಕೆ ಮಾಡಬೇಕಿರುತ್ತದೆ. ಇದಕ್ಕೆ ವಿಫಲವಾದರೆ ಅಥವಾ ಆಯ್ಕೆ ಮಾಡಿ ಬೌಲ್ ಮಾಡದೇ ಇದ್ದರೆ ತಂಡ ಸಂಕಷ್ಟಕ್ಕೆ ಸಿಲುಕಲಿದೆ. ಇದೇ ರೀತಿ ಮೂರು ಬಾರಿ 60 ಸೆಕೆಂಡ್ ಕಾಲಮಿತಿ ಮೀರಿದರೆ ತಂಡಕ್ಕೆ 5 ರನ್ ಪೆನಾಲ್ಟಿ ಹಾಕಲಾಗುವುದು ಎಂದು ಐಸಿಸಿ ತಿಳಿಸಿದೆ.
ಒಂದು ವೇಳೆ ತಂಡ ಪಂದ್ಯದ ಆರಂಭದಲ್ಲೇ ಬೌಲ್ ಮಾಡುವಾಗ ಈ ನಿಯಮ ಉಲ್ಲಂಘಿಸಿದರೆ, ಎದುರಾಳಿ ತಂಡ ನೀಡಿದ ಗುರಿಗೆ ಹೆಚ್ಚಿನ 5 ರನ್ಗಳನ್ನು ಸೇರಿಸಲಾಗುತ್ತದೆ. ಬಳಿಕ ಗುರಿ ನೀಡಿದ ತಂಡ ಕ್ಷೇತ್ರ ರಕ್ಷಣೆ ಮಾಡಿಕೊಳ್ಳುವಾಗ ನಿಯಮ ಉಲ್ಲಂಘನೆಯಾದರೆ ಎದುರಾಳಿ ತಂಡಕ್ಕೂ 5 ರನ್ ಕಡಿತಗೊಳಿಸಲಾಗುತ್ತದೆ.
ಹೊಸ ನಿಯಮಕ್ಕೆ ಕಾರಣವೇನು?: ಇತ್ತೀಚೆಗೆ ಐಸಿಸಿ ಆಯೋಜಿಸುವ ಟೂರ್ನಿ ಅಥವಾ ದ್ವಿಪಕ್ಷೀಯ ಸರಣಿಯ ಪಂದ್ಯಗಳು ನಿಗದಿತ ಸರಿಯಾಗಿ ಮುಕ್ತಾಯವಾಗುತ್ತಿಲ್ಲ. ಒಂದು ಓವರ್ ಆದ ನಂತರ ಅನಗತ್ಯವಾಗಿ ತಂಡಗಳು ಸಮಯ ವ್ಯರ್ಥ ಮಾಡುವುದು ಕಂಡುಬಂದಿದೆ. ಇದರಿಂದ ಆನೇಕರು ಕಾಲಮಿತಿಯೊಳಗೆ ಬೌಲಿಂಗ್ ಮುಗಿಸುವಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಐಸಿಸಿಯನ್ನು ಆಗ್ರಹಿಸಿದ್ದರು. ಇದೀಗ ಈ ಆಗ್ರಹಕ್ಕೆ ಐಸಿಸಿಯಿಂದ ಅನುಮೋದನೆ ಸಿಕ್ಕಿದೆ. ಸದ್ಯ ತಂಡಗಳು ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದಾಗ ನಾಯಕ ಅಥವಾ ಇಡೀ ತಂಡಕ್ಕೆ ಪಂದ್ಯದ ಸಂಭಾವನೆಯ ಇಂತಿಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗುತ್ತಿದೆ.
ಇದನ್ನೂ ಓದಿ: ಮಹಿಳಾ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶವಿಲ್ಲ: ಐಸಿಸಿ ಮಹತ್ವದ ನಿರ್ಧಾರ