ದುಬೈ : ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರಿಸಲು ಐಸಿಸಿ ಮನಸ್ಸು ಮಾಡಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಬಿಡ್ ಸಲ್ಲಿಸುವುದಾಗಿ ಮಂಗಳವಾರ ಖಚಿತಪಡಿಸಿದೆ. ಕೆಲವು ವರ್ಷಗಳಿಂದ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರಿಸುವ ವಿಚಾರವಾಗಿ ಐಸಿಸಿ ಪ್ರಯತ್ನಿಸುತ್ತಿದೆ.
ಇದೀಗ ಐಸಿಸಿ ಜೊತೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ಆಗಿರುವ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ಬೆಂಬಲ ನೀಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಪಡಿಸಿದ್ದಾರೆ. ಅದಕ್ಕಾಗಿ ಐಸಿಸಿ ಒಲಿಂಪಿಕ್ ವರ್ಕಿಂಗ್ ಗ್ರೂಪ್ ರಚಿಸಿದೆ. 2028ರ ಒಲಿಂಪಿಕ್ಸ್‌ನ ಭಾಗವಾಗುವ ಕುರಿತು ಕೆಲಸ ಮಾಡಲಿದೆ ಎಂದು ತಿಳಿದು ಬಂದಿದೆ.
"ಈ ಬಿಡ್‌ಗಾಗಿ ನಮ್ಮ ಕ್ರೀಡೆ ಒಗ್ಗಟ್ಟಾಗಿದೆ. ನಾವು ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ದೀರ್ಘಾವಧಿಯ ಭವಿಷ್ಯದ ಭಾಗವಾಗಲು ನೋಡಲಿದ್ದೇವೆ. ಕ್ರಿಕೆಟ್‌ನಲ್ಲಿ ಇಡೀ ಪ್ರಪಂಚದಾದ್ಯಂತ ನೂರಾರು ಕೋಟಿ ಅಭಿಮಾನಿಗಳನ್ನು ಹೊಂದಿದ್ದೇವೆ. ಅದರಲ್ಲಿ ಶೇ.90ರಷ್ಟು ಮಂದಿ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ನೋಡಲು ಬಯಸುತ್ತಿದ್ದಾರೆ" ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೆ ಐಸಿಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಕ್ರಿಕೆಟ್ ಪ್ರಬಲ ಮತ್ತು ಭಾವನಾತ್ಮಕ ಅಭಿಮಾನಿಗಳ ಸಮೂಹ ಹೊಂದಿದೆ ಎನ್ನುವುದರಲ್ಲಿ ಸ್ಪಷ್ಟತೆಯಿದೆ. ಅದರಲ್ಲೂ ದಕ್ಷಿಣ ಏಷ್ಯಾದಲ್ಲಿ ಶೇ.92ರಷ್ಟು ಅಭಿಮಾನಿಗಳಿದ್ದಾರೆ. ಅಮೆರಿಕಾ ಭಾಗದಲ್ಲಿ 3 ಕೋಟಿಗೂ ಹೆಚ್ಚು ಕ್ರಿಕೆಟ್ ಅಭಿಮಾನಿಗಳಿದ್ದಾರೆ. ಒಲಿಂಪಿಕ್ ಪದಕಕ್ಕಾಗಿ ತಮ್ಮ ನೆಚ್ಚಿನ ಕ್ರಿಕೆಟಿಗರು ಸ್ಪರ್ಧಿಸುವುದನ್ನು ನೋಡಲು ಆ ಅಭಿಮಾನಿಗಳಿಗೆ ಈ ಅವಕಾಶ ಅದ್ಭುತವಾಗಿದೆ " ಬಾರ್ಕ್ಲೆ ಅಭಿಪ್ರಾಯ ಪಟ್ಟಿದ್ದಾರೆ.
ಒಲಿಂಪಿಕ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಉತ್ತಮ ಸೇರ್ಪಡೆಯಾಗಬಹುದೆಂದು ನಾವು ನಂಬುತ್ತೇವೆ. ಆದರೆ, ಒಲಿಂಪಿಕ್ಸ್ಗೆ ಸೇರ್ಪಡೆಗೊಳ್ಳಲು ಬಯಸುತ್ತಿರುವ ಇತರೆ ಹಲವು ಉತ್ತಮ ಕ್ರೀಡೆಗಳು ಇರುವುದರಿಂದ ನಮ್ಮ ಸೇರ್ಪಡೆ ಸುಲಭದ ಮಾತಲ್ಲ ಎಂದು ನಮಗೆ ತಿಳಿದಿದೆ. ಆದರೆ, ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೊಳ್ಳಲು ಇದು ಸೂಕ್ತ ಸಮಯ ಎಂದು ನಾವು ಭಾವಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಟಿ20 ವಿಶ್ವಕಪ್ಗೆ16 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದ ಕಿವೀಸ್