ನವದೆಹಲಿ: ಭಾರತ ತಂಡದ ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರಿಗೆ ಸಂದರ್ಶನ ನೀಡದಿರುವ ಕಾರಣಕ್ಕೆ ಪತ್ರಕರ್ತರೊಬ್ಬರು ಬೆದರಿಕೆ ನೀಡಿರುವುದನ್ನು ಭಾರತೀಯ ಕ್ರಿಕೆಟಿಗರ ಸಂಘ ಖಂಡಿಸಿದ್ದು, ಈ ಪ್ರಕರಣವನ್ನು ತನಿಖೆ ಮಾಡಲು ಮುಂದಾಗಿರುವ ಬಿಸಿಸಿಐ ನಿರ್ಧಾರವನ್ನು ಸ್ವಾಗತಿಸಿದೆ.
ಕ್ರಿಕೆಟ್ ಮತ್ತು ಕ್ರಿಕೆಟಿಗರ ಬೆಳವಣಿಗೆಯಲ್ಲಿ ಮಾಧ್ಯಮ ಅಮೂಲ್ಯ ಪಾತ್ರವನ್ನು ನಿರ್ವಹಿಸುತ್ತದೆ ಎನ್ನುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಅದಕ್ಕೊಂದು ಮಿತಿಯಿದ್ದು, ಅದನ್ನು ಎಂದೂ ದಾಟಬಾರದು ಎಂದು ಐಸಿಎ ಮುಖ್ಯಸ್ಥ ಅಶೋಕ್ ಮೆಲ್ಹೋತ್ರ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಸಹಾ ಪ್ರಕರಣದಲ್ಲಿ ಏನು ನಡೆದಿದಿಯೋ ಅದು ಸ್ವೀಕಾರಾರ್ಹವಲ್ಲ. ನಾವು ಗೌರವಾನ್ವಿತ ಮಾಧ್ಯಮ ಸಂಸ್ಥೆಗಳಿಗೆ ಈ ವಿಚಾರವನ್ನು ಗಮನಕ್ಕೆ ತಂದಿದ್ದು, ಇನ್ನು ಮುಂದೆ ಈ ರೀತಿಯ ವಿಚಾರಗಳು ನಡೆಯದಂತೆ ಕ್ರಮವಹಿಸಿ ಎಂದು ತಿಳಿಸಿದ್ದೇವೆ. ಕ್ರಿಕೆಟಿಗರ ಬಗ್ಗೆ ಐಸಿಗೆ ಪ್ರಮುಖ ಕಾಳಜಿಯಿದೆ, ಹಿಂದಿನ ಮತ್ತು ಪ್ರಸ್ತುತ ಕ್ರಿಕೆಟಿಗರ ಕಲ್ಯಾಣ ಸಂಘ ಬಯಸುತ್ತದೆ. ಅಂತಹ ನಡವಳಿಕೆಯನ್ನು ಪತ್ರಕರ್ತರನ್ನು ಬಿಟ್ಟು ಬೇರೆ ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಐಸಿಎ ಹೇಳಿಕೆಯಲ್ಲಿ ಮೆಲ್ಹೋತ್ರ ತಿಳಿಸಿದ್ದಾರೆ.
ಹೆಸರು ಬಹಿರಂಗಗೊಳಿಸಲಿ: ವೃದ್ಧಿಮಾನ್ ಸಹಾ ಅವರು ತಮಗೆ ಆ ರೀತಿಯ ಬೆದರಿಕೆಯ ಸಂದೇಶವನ್ನು ಕಳುಹಿಸಿರುವ ಪತ್ರಕರ್ತನ ಹೆಸರನ್ನು ಬಹಿರಂಗಗೊಳಿಸಬೇಕು. ಸಹಾ ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ.
ಒಂದು ವೇಳೆ ಬಿಸಿಸಿಐ ಪತ್ರಕರ್ತನ ಮಾನ್ಯತೆ ರದ್ದುಗೊಳಿಸಿ, ಬಿಸಿಸಿಐನ ಯಾವುದೇ ಕಾರ್ಯಕ್ರಮಕ್ಕೆ ಪ್ರವೇಶ ರದ್ದುಗೊಳಿಸಬೇಕೆಂದು ಬಯಸಿದರೆ, ಅದಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಆಟಗಾರರು ಮತ್ತು ಮಾಧ್ಯಮದವರ ಸಂವಹನ ಯಾವಾಗಲೂ ಸ್ವಯಂಪ್ರೇರಿತವಾಗಿರಬೇಕೆ ಹೊರೆತೂ ಬೆದರಿಕೆ ಅಥವಾ ಒತ್ತಾಯ ಪೂರ್ವಕವಾಗಿರಬಾರದು ಎಂದು ಅವರು ತಿಳಿಸಿದ್ದಾರೆ.
ಸಹಾ ಟ್ವೀಟ್ನಲ್ಲೇನಿತ್ತು?: "ನನ್ನ ಜೊತೆಗೆ ಒಂದು ಸಂದರ್ಶನ ಮಾಡಿ, ಒಳ್ಳೆಯದಾಗುತ್ತದೆ, ನೀವು ಎಲ್ಲರಿಗೂ ಸಂದರ್ಶನ ನೀಡಲು ಬಯಸಿದರೆ, ನಾನೇನು ಬಲವಂತ ಮಾಡುವುದಿಲ್ಲ. ಅವರು(ಆಯ್ಕೆ ಸಮಿತಿ) ಅತ್ಯುತ್ತಮವಾದ ಒಬ್ಬ ವಿಕೆಟ್ ಕೀಪರ್ ಆಯ್ಕೆ ಮಾಡಿದ್ದಾರೆ. ನೀವು ಅತ್ಯುತ್ತಮವಲ್ಲದ 11 ಪತ್ರಕರ್ತರನ್ನು ಆಯ್ಕೆ ಮಾಡಿಕೊಂಡಿರುವುದು ನನ್ನ ಪ್ರಕಾರ ಉತ್ತಮ ನಿರ್ಧಾರವಲ್ಲ. ನೀವು ನಿಮಗೆ ಯಾರು ಸಹಾಯ ಮಾಡಬಲ್ಲರೋ ಅವರನ್ನು ಆಯ್ಕೆ ಮಾಡಿ" ಎಂದು ವಾಟ್ಸ್ಆ್ಯಪ್ ಮೂಲಕ ಸರಣಿ ಸಂದೇಶ ಕಳಹಿಸಿದ್ದಾರೆ.
ಆದರೆ, ಅವರ ಕರೆಯನ್ನು ಸಹಾ ಸ್ವೀಕರಿಸದ್ದಕ್ಕೆ ಕೋಪಗೊಂಡಿರುವ ಆ 'ಜರ್ನಲಿಸ್ಟ್' " ನೀವು ನನಗೆ ಕರೆ ಮಾಡಿಲ್ಲ, ಇನ್ನು ಯಾವತ್ತೂ ನಾನು ನಿಮ್ಮ ಸಂದರ್ಶನ ಮಾಡುವುದಿಲ್ಲ. ಈ ಅವಮಾನವನ್ನು ನಾನು ಸಾಮಾನ್ಯ ಎಂದು ಪರಿಗಣಿಸುವುದಿಲ್ಲ. ನಾನು ಇದನ್ನು ನೆನಪಿನಲ್ಲಿಟ್ಟುಕೊಂಡಿರುತ್ತೇನೆ. ಇದು ನೀವು ಮಾಡಬೇಕಾದ ಕೆಲಸವಾಗಿರಲಿಲ್ಲ" ಎಂದು ಕೋಪದಿಂದ ಸಂದೇಶ ಕಳುಹಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ ವಿರುದ್ಧದ ವೈಟ್ಬಾಲ್ ಸರಣಿಯಿಂದ ಹೊರಬಂದ ಸ್ಟಾರ್ ಆಸೀಸ್ ಆಟಗಾರರು