ನವದೆಹಲಿ: ದೊಡ್ಡ ಮೊತ್ತ ಗಳಿಸಿದಾಗ್ಯೂ ನ್ಯೂಜಿಲ್ಯಾಂಡ್ಸ್ ವಿರುದ್ಧದ ಮೊದಲ ಪಂದ್ಯವನ್ನು ಪ್ರಯಾಸಕರವಾಗಿ ಗೆದ್ದ ಭಾರತ ತಂಡ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಈ ಪಂದ್ಯದಲ್ಲಿ ಯುವ ಆಟಗಾರ ಶುಭ್ಮನ್ ಗಿಲ್ ದ್ವಿಶತಕ ಸಾಧನೆ ಮಾಡಿದರೆ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಔಟಾಗಿದ್ದು ಗೊಂದಲಕ್ಕೀಡು ಮಾಡಿದೆ. ಈ ಬಗ್ಗೆ ಮಾಜಿ ಕ್ರಿಕೆಟಿಗರು ಪ್ರತ್ಯೇಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಕಿವೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವಿಲಕ್ಷಣವಾಗಿ ಔಟಾದ ಘಟನೆ ಚರ್ಚೆಗೆ ಗ್ರಾಸವಾಗಿದೆ. ಭಾರತದ ಇನ್ನಿಂಗ್ಸ್‌ನ 40 ನೇ ಓವರ್‌ನಲ್ಲಿ ಈ ಗೊಂದಲ ಸಂಭವಿಸಿತು. ಹಾರ್ದಿಕ್ ಥರ್ಡ್ ಮ್ಯಾನ್‌ನಲ್ಲಿ ಡ್ಯಾರಿಲ್ ಮಿಚೆಲ್ ಅವರ ಚೆಂಡನ್ನು ಹೊಡೆಯಲು ಪ್ರಯತ್ನಿಸಿದರು. ಆದರೆ, ಚೆಂಡು ಆಫ್ ಸ್ಟಂಪ್‌ಗೆ ಅಪ್ಪಳಿಸಿತು.
ಆದರೆ, ಈ ವೇಳೆ ವಿಕೆಟ್‌ಕೀಪರ್ ಟಾಮ್ ಲಾಥಮ್ ಅವರ ಗ್ಲೌಸ್ ತಾಕಿದ್ದರಿಂದ ಬೇಲ್‌ಗಳು ಕೆಳಗೆ ಬಿದ್ದಂತೆ ಕಂಡುಬಂತು. ಬಳಿಕ ಕೀಪರ್ ಲಾಥಮ್ ಕೈಯನ್ನು ಹಿಂದಕ್ಕೆ ತೆಗೆದುಕೊಂಡಾಗ ವಿಕೆಟ್ ಎಗರಿತು. ಚೆಂಡು ಕೂಡ ಸ್ಟಂಪ್‌ನ ಮೇಲೆ ಹಾದುಹೋಯಿತು. ಮೈದಾನದ ಅಂಪೈರ್ಗಳು ಮೂರನೇ ಅಂಪೈರ್ಗೆ ಮನವಿ ಸಲ್ಲಿಸಿದಾಗ, ಪರಿಶೀಲಿಸಿದ ಥರ್ಡ್ ಅಂಪೈರ್ ಕೊನೆಗೆ ಔಟ್ ಎಂದು ಘೋಷಿಸಿದರು.
ಹಾರ್ದಿಕ್ ಪಾಂಡ್ಯರ ಈ ಔಟ್ ವಿವಾದಾತ್ಮಕವಾಗಿದ್ದರೂ ಔಟ್ ತೀರ್ಪು ನೀಡಿದ್ದು, ಚರ್ಚೆಗೆ ಎಡೆ ಮಾಡಿಕೊಟ್ಟಿತು. ವಿಕೆಟ್ ಕೀಪರ್, ನ್ಯೂಜಿಲ್ಯಾಂಡ್ ನಾಯಕ ಟಾಮ್ ಲಾಥಮ್ ಸ್ಟಂಪ್‌ಗೆ ತುಂಬಾ ಹತ್ತಿರದಲ್ಲಿದ್ದುದು ಕ್ಯಾಮೆರಾ ಸೆರೆ ಹಿಡಿದಿದೆ. ವಿಕೆಟ್ನ ಬೇಲ್‌ಗಳಿಗೆ ತೀರಾ ಹತ್ತಿರವಾಗಿ ಕೈಗವಸುಗಳು ಚಲಿಸಿವೆ. ಚೆಂಡು ಸ್ಟಂಪ್‌ಗಳ ಮೇಲೆ ಹಾದುಹೋಗಿ ಕೀಪರ್ ಗ್ಲೌಸ್ ಸೇರಿದ ಬಳಿಕ ವಿಕೆಟ್ನ ದೀಪ ಬೆಳಗಿತು.
ಈ ವೇಳೆ ಚೆಂಡು ವಿಕೆಟ್ ಬಡಿಯದೇ, ಕೀಪರ್ ಗ್ಲೌಸ್ ತಾಕಿದ್ದರಿಂದ ವಿಕೆಟ್ ದೀಪ ಹೊತ್ತಿಕೊಂಡಿತು ಎಂದೇ ಭಾವಿಸಲಾಗಿತ್ತು. ಕ್ಷೇತ್ರ ರಕ್ಷಕರು ಸಲ್ಲಿಸಿದ ಮನವಿಯ ಮೇರೆಗೆ ಮೈದಾನದ ಅಂಪೈರ್ಗಳು ಮೂರನೇ ಅಂಪೈರ್ ಮೊರೆ ಹೋದಾಗ ಟಿವಿ ರಿಪ್ಲೈಯಲ್ಲಿ ವಿಕೆಟ್ಗೆ ಚೆಂಡು ತಾಕಿದ್ದು ಗೊತ್ತಾಯಿತು. ಆದರೂ, ವಿಕೆಟ್ ಕೀಪರ್ ವಿಕೆಟ್ಗಿಂತಲೂ ತನ್ನ ಗ್ಲೌಸ್ಗಳನ್ನು ಮುಂದು ಮಾಡಿದ್ದೂ ಗೋಚರಿಸಿತು. ಅಂಪೈರ್ ಕೊನೆಗೆ ಔಟ್ ನೀಡಿದರು.
ಮಾಜಿ ಕ್ರಿಕೆಟಿಗರ ಪ್ರತ್ಯೇಕ ಅಭಿಪ್ರಾಯ: ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಹಾರ್ದಿಕ್ ಪಾಂಡ್ಯ ಔಟಾದ ವೇಳೆ ಕಾಮೆಂಟರಿ ಮಾಡುತ್ತಿದ್ದರು. ಅಂಪೈರ್ ನೀಡಿದ ತೀರ್ಪನ್ನು ಅವರು ಸ್ವಾಗತಿಸಿದರು. ನಿರ್ಧಾರ ಸಂಪೂರ್ಣವಾಗಿ ಖಚಿತವಾಗಿಲ್ಲದಿದ್ದರೂ ಔಟ್ ನೀಡಲಾಗಿದೆ. ಬೌಲರ್ ಡೇರಿಲ್ ಮಿಚೆಲ್ ವಿಕೆಟ್ ಪಡೆದರು ಎಂದು ಉದ್ಘರಿಸಿದರು.
ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಇದರ ವಿರುದ್ಧ ಟ್ವೀಟ್ ಮಾಡಿದ್ದು, ಇದು ನಿಜಕ್ಕೂ ಗೊಂದಲದ ಔಟಾಗಿದೆ. ಚೆಂಡು ಮತ್ತು ಬೇಲ್ಸ್ ನಡುವೆ ಹೆಚ್ಚಿನ ಅಂತರವಿಲ್ಲ. ಚೆಂಡು ಕೈಗವಸು ಸೇರಿದ್ದರು, ಬೇಲ್ಸ್ ಇನ್ನೂ ಹಾರಿಲ್ಲ. ಬಳಿಕ ಅದರ ದೀಪ ಬೆಳಗಿದೆ. ಇದು ನಿಜಕ್ಕೂ ಅಚ್ಚರಿ. ವಿಕೆಟ್ ಕೀಪರ್ ಗ್ಲೌಸ್ ವಿಕೆಟ್ಗಿಂತಲೂ ಮುಂದಿವೆ. ಹೀಗಾಗಿ ಹಾರ್ದಿಕ್ ಔಟ್ ಆಗಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.