ಮುಂಬೈ : 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಅತ್ಯಧಿಕ ಮೊತ್ತ ಪಡೆದಿರುವ ಇಶಾನ್ ಕಿಶನ್ ಈಗ ತನಗೆ ಸಹಾಯ ಮಾಡಿದ ಹಾರ್ದಿಕ್ ಪಾಂಡ್ಯ ಕುರಿತಂತೆ ಮೆಚ್ಚುಗೆಯ ಮಾತನಾಡಿದ್ದಾರೆ. ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ತಂಡ ಸೇರಿದಾಗ ಹಾರ್ದಿಕ್ ಪಾಂಡ್ಯ ಸಾಕಷ್ಟು ನೆರವು ನೀಡುವ ಮೂಲಕ ತನ್ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದರು ಎಂದು ಇಶಾನ್ ಹೇಳಿಕೊಂಡಿದ್ದಾರೆ.
2018ರ ಮೆಗಾ ಹರಾಜಿನಲ್ಲಿ ಇಶಾನ್ ಕಿಶನ್ ಮುಂಬೈ ಕ್ಯಾಂಪ್ ಸೇರಿದರು. ಆ ಸಂದರ್ಭದಲ್ಲಿ ಅವರು ಸಾಮಾನ್ಯ ಕಚ್ಛಾ ಆಟಗಾರನಾಗಿದ್ದರು. ಹಾರ್ದಿಕ್ ಜಾರ್ಖಂಡ್ನ ಯುವ ಆಟಗಾರನನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಮಾರ್ಗದರ್ಶನ ನೀಡಲು ಶುರು ಮಾಡಿದರು. ಹಾಗಾಗಿ, ತಮ್ಮ ಆರಂಭದ ದಿನಗಳಲ್ಲಿ ಹಾರ್ದಿಕ್ ಪಾಂಡ್ಯರ ಪಾತ್ರ ಹೇಗಿತ್ತು ಎನ್ನುವುದನ್ನು ಮುಂಬೈ ಇಂಡಿಯನ್ಸ್ ವೆಬ್ಸೈಟ್ಗೆ ತಿಳಿಸಿದ್ದಾರೆ.
"ನಾನು ಆ ಸಂದರ್ಭದಲ್ಲಿ ಹಾರ್ದಿಕ್ ಭಾಯ್ ಜೊತೆಗೆ ಹೆಚ್ಚು ಕಾಲ ಕಳೆಯುತ್ತಿದ್ದೆ. ಐಪಿಎಲ್ ವೇಳೆ ತಂಡದಲ್ಲಿರುವ ಪ್ರತಿಯೊಬ್ಬರ ಕೆಲಸದ ನೀತಿಯನ್ನು ನೋಡುತ್ತಿದ್ದೆ. ಹಾರ್ದಿಕ್ ನನ್ನ ಜೊತೆಗೆ 30 ನಿಮಿಷಗಳ ಕಾಲ ಕುಳಿತು ಸಾಕಷ್ಟು ವಿಷಯಗಳನ್ನು ವಿವರಿಸುತ್ತಿದ್ದರು. ಯಾವುದು ಅತ್ಯಂತ ಮಹತ್ವದ್ದು, ಯಾವುದು ಅಲ್ಲ ಮತ್ತು ನಾನೇನು ತಪ್ಪು ಮಾಡುತ್ತಿದ್ದೇನೆ ಎನ್ನುವುದನ್ನು ಅವರು ತಿಳಿಸಿಕೊಡುತ್ತಿದ್ದರು".
ಹಾರ್ದಿಕ್ ಅಲ್ಲದೆ ತಂಡದ ಎಲ್ಲಾ ಹಿರಿಯ ಆಟಗಾರರೆಲ್ಲರೂ ಒಟ್ಟಿಗೆ ಕುಳಿತುಕೊಳ್ಳುತ್ತಿದ್ದರು. ಆದರೆ, ನಾನು ಆಗಿನ್ನೂ ಯುವ ಆಟಗಾರನಾಗಿದ್ದರಿಂದ ಅವರಂತಾಗಲು ದಾರಿಯನ್ನು ಹುಡುಕುತ್ತಿದ್ದೆ. ಹಾರ್ದಿಕ್ ಭಾಯ್ ನನ್ನನ್ನು ತಮಗೆ ವಹಿಸಿಕೊಡುವಂತೆ ಮ್ಯಾನೇಜ್ಮೆಂಟ್ಗೆ ಕೇಳಿಕೊಳ್ಳುತ್ತಿದ್ದರು. ಹಾಗೆಯೇ, ಆಗಾಗ ಅವರು, 'ನೀನು ಪ್ರಗತಿ ಕಾಣದಿದ್ದರೆ, ನಾವು ನಿನಗೆ ಪಂದ್ಯದಲ್ಲಿ ಅವಕಾಶ ಕೊಡಲು ಸಾಧ್ಯವಿಲ್ಲ' ಎಂದು ಕಟುವಾಗಿ ಹೇಳುತ್ತಿದ್ದರು. ನನಗೂ ಅವರೆಲ್ಲಾ ಹೇಳುವುದು ನನ್ನ ಒಳಿತಿಗಾಗಿಯೇ ಎನ್ನುವ ಭಾವನೆ ಬರುತ್ತಿತ್ತು" ಎಂದು ಇಶಾನ್ ತಿಳಿಸಿದ್ದಾರೆ.
ಮಾತು ಮುಂದುವರಿಸಿ, ಕೃನಾಲ್ ಪಾಂಡ್ಯ ಕೂಡ ಮುಂಬೈ ತಂಡದಲ್ಲಿದ್ದ ವೇಳೆ ನನಗೆ ಸಾಕಷ್ಟು ರೀತಿಯಲ್ಲಿ ನೆರವಾಗಿದ್ದಾರೆ. ನಾವು ಐಪಿಎಲ್ ನಂತರ 3-4 ತಿಂಗಳಿಗೊಮ್ಮೆ ಭೇಟಿ ಮಾಡುತ್ತಿದ್ದೆವು. ಆ ವೇಳೆ ನಮ್ಮ ಪ್ರಗತಿಯ ಬಗ್ಗೆ ಟ್ರ್ಯಾಕ್ ಮಾಡುತ್ತಿದ್ದೆವು. ಪ್ರತಿ ವಿಷಯಗಳನ್ನು ಒಟ್ಟಿಗೆ ಹಂಚಿಕೊಳ್ಳುತ್ತಾ, ಸವಾಲುಗಳನ್ನು ಹಾಕಿಕೊಳ್ಳುತ್ತಿದ್ದೆವು ಎಂದು ಇಶಾನ್ ತಮ್ಮ ವೃತ್ತಿ ಜೀವನದ ಬೆಳವಣಿಗೆಯಲ್ಲಿ ಪಾಂಡ್ಯ ಬ್ರದರ್ಸ್ ಪಾತ್ರವನ್ನು ಗುಣಗಾನ ಮಾಡಿದ್ದಾರೆ.
ಇದನ್ನೂ ಓದಿ:ಐಪಿಎಲ್ನಲ್ಲಿ ಶತಕದ ಜಯ ಬಾರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು