ನವದೆಹಲಿ: ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಂದು ಪಂದ್ಯ ಅಹರ್ನಿಶಿ ಟೆಸ್ಟ್ ಪಂದ್ಯ ಆಗಿದ್ದು, ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ ಖಚಿತ ಪಡಿಸಿದ್ದಾರೆ.
ವಿಂಡೀಸ್ ವಿರುದ್ಧ ಕೋಲ್ಕತ್ತಾದಲ್ಲಿ 3 ಪಂದ್ಯಗಳ ಟಿ20 ಸರಣಿ ಮುಗಿದ ಬಳಿಕ ಭಾರತ ಶ್ರೀಲಂಕಾಗೆ 3 ಪಂದ್ಯಗಳ ಟಿ20 ಮತ್ತು ಫೆಬ್ರವರಿ ಅಂತ್ಯ ಮತ್ತು ಮಾರ್ಚ್ ಆರಂಭದಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿಗೆ ಆತಿಥ್ಯವಹಿಸಲಿದೆ.
ಹೌದು, ಬೆಂಗಳೂರಿನಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯ ನಡೆಯಲಿದೆ. ಪ್ರಸ್ತುತ ನಾವು ಶ್ರೀಲಂಕಾ ವಿರುದ್ಧದ ಸರಣಿಗೆ ಇನ್ನೂ ಸ್ಥಳಗಳನ್ನು ಅಂತಿಮಗೊಳಿಸಿಲ್ಲ. ಶೀಘ್ರದಲ್ಲೇ ಘೋಷಿಸಲಿದ್ದೇವೆ ಎಂದು ಸ್ಪೋರ್ಟ್ಸ್ ಸ್ಟಾರ್ಗೆ ಮಾಹಿತಿ ನೀಡಿದ್ದಾರೆ.
3ನೇ ಅಹರ್ನಿಶಿ ಪಂದ್ಯ.. ಶ್ರೀಲಂಕಾ ಮತ್ತು ಭಾರತದ ವಿರುದ್ಧ ನಡೆಯಲಿರುವ ಅಹರ್ನಿಶಿ ಟೆಸ್ಟ್ ಪಂದ್ಯ 3ನೇ ಪಂದ್ಯವಾಗಲಿದೆ. ಈಗಾಗಲೇ 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದ ಈಡನ್ಗಾರ್ಡನ್ನಲ್ಲಿ, ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಅಹ್ಮದಾಬಾದ್ನಲ್ಲಿ 2ನೇ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಭಾರತ ಆತಿಥ್ಯವಹಿಸಿತ್ತು.
ಭಾರತದಲ್ಲೇ ಐಪಿಎಲ್.. ಕೋವಿಡ್ 19 ಪ್ರಕರಣಗಳ ಹೆಚ್ಚಳ ತೊಂದರೆಯನ್ನುಂಟು ಮಾಡದಿದ್ದರೆ ಐಪಿಎಲ್ 2022 ಅನ್ನು ಭಾರತದಲ್ಲಿ ನಡೆಸಲಾಗುವುದು ಎಂದು ಗಂಗೂಲಿ ದೃಢಪಡಿಸಿದ್ದಾರೆ. ಸ್ಥಳಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ - ಮುಂಬೈ ಮತ್ತು ಪುಣೆಯಲ್ಲಿ ಪಂದ್ಯಗಳನ್ನು ಆಯೋಜಿಸಲು ನಾವು ಎದುರು ನೋಡುತ್ತಿದ್ದೇವೆ. ನಾಕೌಟ್ ಹಂತಗಳಿಗೆ ಸ್ಥಳಗಳನ್ನು ನಂತರ ತೀರ್ಮಾನಿಸುತ್ತೇವೆ ಎಂದು ದಾದಾ ತಿಳಿಸಿದ್ದಾರೆ.
ವುಮೆನ್ಸ್ ಐಪಿಎಲ್ ಈ ವರ್ಷವಿಲ್ಲ.. ವುಮೆನ್ಸ್ ಟಿ20 ಚಾಲೆಂಜ್ ಈ ವರ್ಷ ಮರಳಲಿದೆ. ಆಶಾದಾಯಕವಾಗಿ ಮಹಿಳಾ ಆಟಗಾರರ ಸಂಖ್ಯೆ ಏರಿಕೆಯಾದರೆ ಭವಿಷ್ಯದಲ್ಲಿ ಮಹಿಳೆಯರ ಐಪಿಎಲ್ ಅನ್ನು ದೊಡ್ಡಮಟ್ಟದಲ್ಲಿ ಆಯೋಜಿಸಲು ಸಾಧ್ಯವಾಗುತ್ತದೆ. ಆದರೆ ಈ ವರ್ಷ ಮಾತ್ರ ಐಪಿಎಲ್ ಪ್ಲೇ ಆಫ್ ವೇಳೆ ಹಿಂದಿನಂತೆ ವುಮೆನ್ಸ್ ಟಿ20 ಚಾಲೆಂಜ್ ನಡೆಯಲಿದೆ ಎಂದು ಗಂಗೂಲಿ ತಿಳಿಸಿದ್ದಾರೆ.
ಇದನ್ನೂ ಓದಿ:India vs West Indies ODI; ಏಕದಿನ ಸರಣಿ ಮುಂದೂಡಿಕೆ ಸಾಧ್ಯತೆ