ಮುಂಬೈ: ಕಳಪೆ ಆಟದ ಹೊರತಾಗಿಯೂ ರುತುರಾಜ್ ಗಾಯಕ್ವಾಡ್ ಅವರನ್ನು ಮತ್ತೆ ತಂಡದಲ್ಲಿ ಆಡಿಸುವ ತೀರ್ಮಾನ ತೆಗೆದುಕೊಳ್ಳಲು ತಾವೂ ಹಿಂದಿನಿಂದಲೂ ಅನುಸರಿಸುವ ಸೈಕಾಲಜಿ ಅಭ್ಯಾಸವು ನೆರವಾಯಿತು ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬುಧವಾರ ಹೇಳಿದ್ದಾರೆ.
ಮೊದಲ ಮೂರು ಪಂದ್ಯಗಳಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಗಾಯಕ್ವಾಡ್ ಬುಧವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 42 ಎಸೆತಗಳಲ್ಲಿ 62 ರನ್ ಬಾರಿಸಿ ಸಿಎಸ್‌ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
" ರುತು ಕಳೆದ ಐಪಿಎಲ್ನಲ್ಲಿ ತಮ್ಮ ಅತ್ಯುತ್ತಮ ಆಟವನ್ನು ತೋರಿದ್ದಾರೆ. ಹಾಗಾಗಿ ಅವರ ಮಾನಸಿಕ ಸ್ಥಿತಿ ಎಲ್ಲಿದೆ ಎನ್ನುವುದನ್ನು ನಿರ್ಣಯಿಸಬೇಕಾಗುತ್ತದೆ. ಅವರನ್ನು ಈ ದಿನ ಹೇಗಿದ್ದೀರಾ ಎಂದು ನಾನು ಕೇಳಿದೆ. ಆ ಪ್ರಶ್ನೆಯನ್ನು ನೀವು ಕೇಳಿದ ನಂತರ ಅವರ ಪ್ರತಿಕ್ರಿಯೆಗೆ ಕಾಯುತ್ತಿರಿತ್ತೀರಾ, ಆಗ ಆತನ ಕಣ್ಣಲ್ಲಿ ಏನಿದೆ ಎಂಬುದು ನಿಮಗೆ ತಿಳಿಯುತ್ತದೆ" ಎಂದು ಧೋನಿ ಪಂದ್ಯದ ನಂತರ ತಿಳಿಸಿದ್ದಾರೆ.
" ನನ್ನ ಪ್ರಶ್ನೆಗೆ ಅವರ ಪ್ರತಿಕ್ರಿಯೆ ನೀಡುವಾಗ ನನಗೆ ಅವರ ಮನಸಿನಲ್ಲಿ ಯಾವುದೇ ಒತ್ತಡವಿಲ್ಲ ಎನ್ನುವುದು ನನ್ನ ಅರಿವಿಗೆ ಬಂದಿತು. ಏಕೆಂದರೆ ನನ್ನ ವೃತ್ತಿ ಜೀವನದುದ್ದಕ್ಕೂ ಇಂತಹದನ್ನೇ ಸಾಕಷ್ಟು ಮಾಡಿದ್ದೇನೆ, ಈ ಪಂದ್ಯದಲ್ಲಿ ಅವರ ಸಾಮರ್ಥ್ಯ ತೋರಿಸಿಕೊಂಡಿದ್ದಾರೆ" ಎಂದು ಧೋನಿ ಹೇಳಿದ್ದಾರೆ.
ಸಿಎಸ್‌ಕೆ ನಿನ್ನೆಯ ಪಂದ್ಯದಲ್ಲಿ ಡುಪ್ಲೆಸಿಸ್ ಮತ್ತು ಗಾಯಕ್ವಾಡ್ ಅವರ ಅರ್ಧಶತಕಗಳ ನೆರವಿನಿಂದ 3 ವಿಕೆಟ್ ಕಳೆದುಕೊಂಡು 220 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಕೆಕೆಆರ್ 31ಕ್ಕೆ 5 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತದಿಂದ ಸೋಲುವ ಹಂತದಲ್ಲಿತ್ತು. ಆದರೆ ಆ್ಯಂಡ್ರೆ ರಸೆಲ್, ಪ್ಯಾಟ್ ಕಮ್ಮಿನ್ಸ್ ಅರ್ಧಶತಕ ಮತ್ತು ದಿನೇಶ್ ಕಾರ್ತಿಕ್ 42 ರನ್ಗಳ ನೆರವಿನಿಂದ 202 ರನ್ ಗಳಿಸಿ 18 ರನ್ಗಳ ವಿರೋಚಿತ ಸೋಲು ಕಂಡಿತು.
ಇದನ್ನು ಓದಿ: ಡುಪ್ಲೆಸಿ, ಗಾಯಕವಾಡ್ ಸ್ಫೋಟಕ ಆಟಕ್ಕೆ ಒಲಿದ ಗೆಲುವು; ಅಗ್ರಸ್ಥಾನಕ್ಕೆ ಏರಿದ ಸಿಎಸ್‌ಕೆ