ವಿಶಾಖಪಟ್ಟಣಂ(ಆಂಧ್ರಪ್ರದೇಶ): ಏಕದಿನ ವಿಶ್ವಕಪ್ ಸೋಲಿನ ನಂತರ ಟೀಂ ಇಂಡಿಯಾ ಹಾಲಿ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಸಿದ್ಧವಾಗಿದೆ. ಮೊದಲ ಪಂದ್ಯ ಇಂದು ವಿಶಾಖಪಟ್ಟಣಂ ಮೈದಾನದಲ್ಲಿ ನಡೆಯಲಿದೆ. ಸ್ಟಾರ್ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ 2024ರ ಟಿ20 ವಿಶ್ವಕಪ್‌ಗೂ ಮುನ್ನ ಸವಾಲು ಎದುರಿಸುತ್ತಿದೆ.
ಪಂದ್ಯದ ಮುನ್ನಾದಿನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, ವಿಶ್ವಕಪ್ ಸೋಲಿನಿಂದ ಹೊರಬರುಲ ಸಮಯ ಬೇಕು. ಸದ್ಯಕ್ಕೆ ಹೊಸ ತಂಡ ಮುನ್ನಡೆಸಲು ನಾನು ಉತ್ಸುಕನಾಗಿದ್ದೇನೆ. ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯಲ್ಲಿ ನಿರ್ಭೀತವಾಗಿ ಕ್ರಿಕೆಟ್ ಆಡುವಂತೆ ತಂಡದ ಸದಸ್ಯರಿಗೆ ಕಿವಿಮಾತು ಹೇಳಿದ್ದೇನೆ. ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ನಾವು ಆಡಲಿರುವ ಪಂದ್ಯಗಳು ಬಹಳ ಮುಖ್ಯವಾಗುತ್ತವೆ ಎಂದರು.
ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಈ ಸರಣಿಗೆ ತಂಡದ ಮುಖ್ಯ ಕೋಚ್ ಆಗಿದ್ದಾರೆ.
ವಿಶ್ವಕಪ್‌ನಲ್ಲಿ ಸೂರ್ಯಗೆ ಆಸೀಸ್ ಕಡಿವಾಣ: ಏಕದಿನ ವಿಶ್ವಕಪ್‌ನಲ್ಲಿ ನಿರೀಕ್ಷೆ ತಲುಪುವಲ್ಲಿ ವಿಫಲರಾದ ಸೂರ್ಯಕುಮಾರ್ 7 ಇನ್ನಿಂಗ್ಸ್ ಮೂಲಕ ಗಳಿಸಿದ್ದು ಕೇವಲ 106 ರನ್. ಆದರೆ ಇದೀಗ ತನಗೆ ನೀಡಿರುವ ಟಿ20 ಸಾರಥ್ಯದಲ್ಲಿ ಶಕ್ತಿ ಪ್ರದರ್ಶಿಸಲು ಸಜ್ಜಾಗಿದ್ದಾರೆ. ಈ ಮಾದರಿಯಲ್ಲಿ ವಿಶ್ವದ ನಂಬರ್ ಒನ್ ಬ್ಯಾಟರ್ ಆಗಿರುವ ಸೂರ್ಯ ಈಗ ತಂಡದ ನಾಯಕನೂ ಹೌದು. ಟಿ20 ತಂಡ ಮುನ್ನಡೆಸುತ್ತಿದ್ದ ಹಾರ್ದಿಕ್ ಗಾಯದ ಸಮಸ್ಯೆಯಿಂದ ದೂರವಿದ್ದು ಇದೇ ಪ್ರಥಮ ಬಾರಿಗೆ ತಂಡ ಮುನ್ನಡೆಸುವ ಜವಾಬ್ದಾರಿ ಸೂರ್ಯ ಅವರಿಗೆ ಸಿಕ್ಕಿದೆ.
ವಿಶ್ವಕಪ್ ಫೈನಲ್‌ನಲ್ಲಿ ನಿಧಾನಗತಿಯ ಬೌನ್ಸರ್‌ಗಳನ್ನು ಬಳಸಿ, ಡೀಪ್ ಥರ್ಡ್ ಮತ್ತು ಫೈನ್ ಲೆಗ್‌ನಲ್ಲಿ ಫೀಲ್ಡರ್‌ಗಳನ್ನು ನಿಯೋಜಿಸಿ ಸೂರ್ಯ ಅವರನ್ನು ಕಟ್ಟಿಹಾಕಿದ್ದ ಆಸ್ಟ್ರೇಲಿಯಾ, ಈ ಸರಣಿಯಲ್ಲೂ ಅದೇ ತಂತ್ರ ಮುಂದುವರಿಸಬಹುದು. ಅವರು ಈ ಪರೀಕ್ಷೆಯನ್ನು ಹೇಗೆ ಎದುರಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಸೂರ್ಯ ದೇಶಿ ಕ್ರಿಕೆಟ್‌ನಲ್ಲಿ ಮುಂಬೈ ತಂಡದ ನಾಯಕರಾಗಿ ಅನುಭವ ಹೊಂದಿದ್ದಾರೆ. ಐಪಿಎಲ್‌ನಲ್ಲೂ ತಂಡದ ಹಂಗಾಮಿ ನಾಯಕರಾಗಿದ್ದರು.
ವಿಶ್ವಕಪ್‌ನಲ್ಲಿ ಆಡಿರುವ ಇಶಾನ್ ಕಿಶನ್ ಮತ್ತು ಪ್ರಸಿದ್ಧ್ ಕೃಷ್ಣ ಮಾತ್ರ ಈ ಸರಣಿಗೆ ಆಯ್ಕೆಯಾಗಿದ್ದಾರೆ. ಶ್ರೇಯಸ್ ಅಯ್ಯರ್ ಕೊನೆಯ ಎರಡು ಟಿ20ಗಳಲ್ಲಿ ಆಡುವರು.
ಈ ಪಂದ್ಯದಲ್ಲಿ ಭಾರತ ಯಾವ ತಂಡದೊಂದಿಗೆ ಕಣಕ್ಕಿಳಿಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಇಶಾನ್ ಕಿಶನ್ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಇರಲಿದ್ದಾರೆ. ಯಶಸ್ವಿ ಜೊತೆ ಇನ್ನಿಂಗ್ಸ್ ಆರಂಭಿಸುವವರು ಯಾರು, ಇಶಾನ್ ಓಪನಿಂಗ್ಗೆ ಬರುತ್ತಾರಾ ಅಥವಾ ಯಶಸ್ವಿ ಜೊತೆ ಉಪನಾಯಕ ರುತುರಾಜ್ ಕಣಕ್ಕಿಳಿಯುತ್ತಾರಾ ಎಂಬುದನ್ನು ಕಾದುನೋಡಬೇಕು.
ವಿಶಾಖಪಟ್ಟಣಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಇದುವರೆಗೆ 5 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. 4ರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 26 ಟಿ20 ಪಂದ್ಯಗಳು ನಡೆದಿವೆ. ಭಾರತ 15 ಪಂದ್ಯಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ 10 ಪಂದ್ಯಗಳನ್ನು ಜಯಿಸಿದೆ. ಒಂದು ಪಂದ್ಯ ರದ್ದಾಗಿದೆ.
ಭಾರತ ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ಯಶಸ್ವಿ, ಸೂರ್ಯಕುಮಾರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್/ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್, ಪ್ರಸಿದ್ಧ್ /ಆವೇಶ್, ಮುಖೇಶ್.
ಇದನ್ನೂ ಓದಿ: ಟಿ20 ಕ್ರಿಕೆಟ್‌ನಿಂದ ದೂರ ಉಳಿದ ರೋಹಿತ್ ಶರ್ಮಾ