ಲಂಡನ್: ಇಂಗ್ಲೆಂಡ್ನಲ್ಲಿ ಇದೇ ಮೊದಲ ಬಾರಿಗೆ 100 ಎಸೆತಗಳ ಹಂಡ್ರೆಂಡ್ ಟೂರ್ನಮೆಂಟ್ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಆಡಲು ಭಾರತೀಯ ಪುರುಷರ ಕ್ರಿಕೆಟರ್ಗಳಿಗೆ ಅವಕಾಶವಿಲ್ಲವಾದರೂ 5 ಮಹಿಳಾ ಕ್ರಿಕೆಟಿಗರು ವಿನೂತನ ಟೂರ್ನಿಯ ಭಾಗವಾಗಲಿದ್ದಾರೆ.
ಭಾರತ ಟಿ-20 ತಂಡದ ನಾಯಕ ಹರ್ಮನ್ ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜೆಮೀಮಾ ರೋಡ್ರಿಗಸ್ ಮತ್ತು ದೀಪ್ತಿ ಶರ್ಮಾ ಉದ್ಘಾಟನಾ ಹಂಡ್ರೆಡ್ ಲೀಗ್ನಲ್ಲಿ ಆಡಲಿದ್ದಾರೆ. ಟಿ-20 ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲಿರುವ ಶೆಫಾಲಿ ವರ್ಮಾ ನ್ಯೂಜಿಲ್ಯಾಂಡ್ ತಂಡದ ನಾಯಕಿ ಸೂಫಿ ಡಿವೈನ್ ಬದಲಿ ಆಟಗಾರ್ತಿಯಾಗಿ ಬರ್ಮಿಂಗ್ಹ್ಯಾಮ್ ಫೊಯಿನಿಕ್ಸ್ ತಂಡದ ಪರ ಆಡಲಿದ್ದಾರೆ.
ಕಿಯಾ ಓವೆಲ್ನಲ್ಲಿ ಜುಲೈ 21ರಂದು ನಡೆಯಯವ ಉದ್ಘಾಟನಾ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಮ್ಯಾಂಚೆಸ್ಟರ್ ಒರಿಜಿನಲ್ಸ್ ಪರ ಆಡಿದರೆ, ಜೆಮೀಮಾ ರೋಡ್ರಿಗಸ್ ನಾರ್ಥರ್ನ್ ಸೂಪರ್ ಚಾರ್ಜರ್ಸ್ ಪರ ಕಾಣಿಸಿಕೊಳ್ಳಲಿದ್ದಾರೆ.
" ನಾನು ಹಂಡ್ರೆಡ್ನ ಮೊದಲ ಪಂದ್ಯದಲ್ಲೇ ಆಡಲು ಹೋಗುತ್ತಿರುವುದು ತುಂಬಾ ರೋಮಾಂಚನಕಾರಿಯಾಗಿದೆ" ಎಂದು ಹರ್ಮನ್‌ಪ್ರೀತ್ ಕೌರ್ ಹಂಡ್ರೆಡ್ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಅಲ್ಲಿ ಇತಿಹಾಸ ನಿರ್ಮಿಸುವುದು ವಿಶೇಷವಾಗಿರುತ್ತದೆ, ಅದರಲ್ಲೂ ಅಂತಹ ದೊಡ್ಡ ಮೈದಾನದಲ್ಲಿ ಮಹಿಳಾ ಪಂದ್ಯ ನಡೆದಾಗ ಅದು ನಿಜಕ್ಕೂ ವಿಶೇಷ. ನಾವು ಭಾರತದಲ್ಲಿ ದೊಡ್ಡ ಜನಸಮೂಹದ ಮುಂದೆ ಕೆಲವು ಪಂದ್ಯಗಳನ್ನ ಆಡಿದ್ದೇವೆ. ಅಂತಹ ಸಂದರ್ಭ ಯಾವಾಗಲೂ ಆಟಗಾರರಿಗೆ ಉತ್ತಮ ಅನುಭವವಾಗಿರುತ್ತದೆ" ಎಂದು ಹರ್ಮನ್ ಹೇಳಿದರು.
ಭಾರತದ ಸ್ಫೋಟಕ ಆಟಗಾರ್ತಿ ಸ್ಮೃತಿ ಮಂದಾನ ಸೌಥರ್ನ್ ಬ್ರೇವ್ ತಂಡದ ಪರ ಹಾಗೂ ಆಲ್ರೌಂಡರ್ ದೀಪ್ತಿ ಶರ್ಮಾ ಇಂಗ್ಲೆಂಡ್ ನಾಯಕಿ ಹೀದರ್ ನೈಟ್ ನಾಯಕತ್ವದ ಲಂಡನ್ ಸ್ಪಿರಿಟ್ ಪರ ಆಡಲಿದ್ದಾರೆ.
ಇದನ್ನು ಓದಿ: ದ್ರಾವಿಡ್ ಭಾಯ್ ಪ್ರಸಿದ್ಧನಲ್ಲದ ನನ್ನಂಥವನ ಕರೆಗೆ ಓಗೊಟ್ಟು 15 ನಿಮಿಷ ಮಾತನಾಡಿದ್ರು!: ಪಾಕ್ ಕ್ರಿಕೆಟಿಗ