ಲಂಡನ್: ಕಳೆದ ಕೆಲವು ತಿಂಗಳಿಂದ ಬ್ಯಾಟಿಂಗ್ನಲ್ಲಿ ತೀವ್ರ ವೈಫಲ್ಯ ಅನುಭವಿಸುತ್ತಿರುವ ಇಂಗ್ಲೆಂಡ್ ಏಕದಿನ ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್ ಸದ್ಯದಲ್ಲೇ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಇಂಗ್ಲಿಷ್ ಸುದ್ದಿಸಂಸ್ಥೆಯೊಂದರ ವರದಿಯ ಪ್ರಕಾರ, ಬುಧವಾರ ಮಾರ್ಗನ್ ಮಹತ್ವದ ನಿರ್ಧಾರ ಪ್ರಕಟಿಸುವರು.
ಇಂಗ್ಲೆಂಡ್ ಕ್ರಿಕೆಟ್ ನಾಯಕನಾಗಿ ಅತ್ಯದ್ಭುತ ಪ್ರದರ್ಶನ ನೀಡಿರುವ ಮಾರ್ಗನ್, 2019ರಲ್ಲಿ ನಾಯಕನಾಗಿದ್ದಾಗ ತಂಡ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು. ಆದರೆ, ಕಳೆದ ಕೆಲವು ತಿಂಗಳಿನಿಂದ ಅವರು ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಹೀಗಾಗಿ, ನಿವೃತ್ತಿಯ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಾರ್ಗನ್ ನಿವೃತ್ತಿಯ ನಂತರ ತಂಡದ ನಾಯಕತ್ವ ವಿಕೆಟ್ ಕೀಪರ್, ಬ್ಯಾಟರ್ ಜೋಸ್ ಬಟ್ಲರ್ ಹೆಗಲೇರಲಿದೆ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ: ENG vs IND Test: ರೋಹಿತ್‌ಗೆ ಕೋವಿಡ್, ಮಯಾಂಕ್‌ಗೆ ಅವಕಾಶ, ಯಾರಿಗೆ ನಾಯಕತ್ವ?
ಇಂಗ್ಲೆಂಡ್ ಪರ 248 ಏಕದಿನ ಪಂದ್ಯಗಳನ್ನಾಡಿರುವ ಮಾರ್ಗನ್ 14 ಶತಕ ಹಾಗೂ 47 ಅರ್ಧಶತಕ ಸೇರಿದಂತೆ 8,447 ರನ್ ಕಲೆ ಹಾಕಿದ್ದಾರೆ. ಟಿ20 ಕ್ರಿಕೆಟ್ನಲ್ಲಿ 115 ಪಂದ್ಯಗಳಿಂದ 2,458 ರನ್ ಸಂಪಾದಿಸಿದ್ದಾರೆ. ಕೇವಲ 16 ಟೆಸ್ಟ್ ಪಂದ್ಯಗಳನ್ನಾಡಿದ್ದು, 700 ರನ್ ಗಳಿಸಿದ್ದಾರೆ.
ಇತ್ತೀಚೆಗೆ ನೆದರ್ಲೆಂಡ್ಸ್ ವಿರುದ್ಧ ನಡೆದ ಮೊದಲೆರಡು ಪಂದ್ಯಗಳಲ್ಲೂ ಮಾರ್ಗನ್ ಖಾತೆ ತೆರೆಯುವುದಕ್ಕೂ ಮುನ್ನವೇ ವಿಕೆಟ್ ಒಪ್ಪಿಸಿದ್ದರು. ಬಳಿಕ ಗಾಯದ ಸಮಸ್ಯೆಯಿಂದಾಗಿ ಕೊನೆಯ ಪಂದ್ಯದಿಂದ ಹೊರಗುಳಿದಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದ ಮಾರ್ಗನ್, ಸಂಪೂರ್ಣವಾಗಿ ವಿಫಲವಾಗಿದ್ದರು. ಹೀಗಾಗಿ, ಅವರನ್ನು ತದನಂತರ ಯಾವುದೇ ಫ್ರಾಂಚೈಸಿ ಖರೀದಿ ಮಾಡಿಲ್ಲ.
2015ರಲ್ಲಿ ಅಲಿಸ್ಟರ್ ಕುಕ್ ಏಕದಿನ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿದ ನಂತರ ಈ ಸ್ಥಾನಕ್ಕೆ ಇಯಾನ್ ಮಾರ್ಗನ್ ಆಯ್ಕೆಯಾಗಿದ್ದರು. ಕೇವಲ ನಾಲ್ಕು ವರ್ಷಗಳಲ್ಲಿ ಬಲಿಷ್ಠ ತಂಡ ಕಟ್ಟಿ ಇಂಗ್ಲೆಂಡ್‌ಗೆ ಚೊಚ್ಚಲ ಏಕದಿನ ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯೂ ಆಗಿದ್ದರು. 2016ರ ಐಸಿಸಿ ಟಿ20 ವಿಶ್ವಕಪ್ನಲ್ಲೂ ತಂಡವನ್ನು ಫೈನಲ್ಗೇರಿಸುವಲ್ಲಿ ಮಾರ್ಗನ್ ಪಾತ್ರ ಮಹತ್ವದ್ದಾಗಿತ್ತು. ಆದರೆ, ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲಿಷರು ಸೋಲು ಕಂಡಿದ್ದರು.